Online News in ಕನ್ನಡ

2ನೇ ಬ್ರೇಕ್ ಫಾಸ್ಟ್ ಮೀಟಿಂಗ್‍ನಲ್ಲಿ ಸಿಎಂ-ಡಿಸಿಎಂ ನಡುವೆ ನಡೆದ ಮಾತುಕತೆ ಏನು ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಮತ್ತೊಂದು ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಟ್ಟು ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಮತ ಇಲ್ಲ ಹಾಗೂ ಸರಕಾರ ಸುಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಈ ಬಾರಿ ಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿ ಕೋಳಿ ಸಾರು, ಇಡ್ಲಿ ಸವಿದು ಸುದೀರ್ಘವಾಗಿ ಮಾತುಕತೆ ನಡೆಸಿದರು.
ಬೆಳಗ್ಗೆ ಸಿಎಂ ಆಗಮನಕ್ಕೆ ತಮ್ಮ ನಿವಾಸದ ಹೊರಗೆ ಕಾದು ನಿಂತ ಡಿಸಿಎಂ ಶಿವಕುಮಾರ್, ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆಯೆ ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರ ಡಿ.ಕೆ.ಸುರೇಶ್ ಸಹ ಉಪಸ್ಥಿತರಿದ್ದು ಸಿದ್ದರಾಮಯ್ಯ ಅವರಿಗೆ ಹೂಗುಚ್ಚ ನೀಡಿ, ಕಾಲಿಗೆ ನಮಸ್ಕಾರ ಮಾಡಿಕೊಂಡು ಸ್ವಾಗತಿಸಿಕೊಂಡರು. ನಂತರ ಒಟ್ಟಾಗಿ ಕುಳಿತು ಉಪಹಾರ ಸೇವಿಸಿದರು. ಶಾಸಕರ ರಂಗನಾಥ್ ಜೊತೆಗಿದ್ದರು.
ಉಪಹಾರ ಸಭೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮತ್ತೊಮ್ಮೆ ಹೈಕಮಾಂಡ್ ತೀರ್ಮಾನವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಯಾವಾಗ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ `ಹೈಕಮಾಂಡ್ ಹೇಳಿದಾಗ..’ ಎಂದಷ್ಟೇ ಉತ್ತರ ನೀಡಿದರು. ಸಚಿವ ಸಂಪುಟ ವಿಸ್ತರಣೆ ವೇಳೆ ಶೇ. 15ರಷ್ಟು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ. ನಮ್ಮ ಪಕ್ಷದಲ್ಲಿರುವ ಎಲ್ಲ ಶಾಸಕರು ಅರ್ಹರಿದ್ದಾರೆ. ಆದರೆ, ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ನುಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಉಪಹಾರದ ಸಭೆಯಲ್ಲಿ ರಾಜಕೀಯವಾಗಿ ಎಲ್ಲ ವಿಷಯಗಳನ್ನೂ ಮಾತನಾಡಿದ್ದೇವೆ. ನಾಲ್ಕು ಎಂಎಲ್‍ಸಿ ಸ್ಥಾನಕ್ಕೆ ನೇಮಕಾತಿ ಕುರಿತು ಚರ್ಚೆಯಾಗಿದೆ. ಒಂದು ಸ್ಥಾನದ ಬಗ್ಗೆ ಸುರ್ಜೆವಾಲ ಅವರೊಂದಿಗೆ ಮಾತುಕತೆ ನಡೆಸಿ ತೀರ್ಮಾನಿಸಲಾಗುವುದು. ಅಲ್ಲದೆ, ಸರಕಾರದ ವಿಷಯ, ಅಧಿವೇಶನದ ವಿಷಯದ ಬಗ್ಗೆ ಮಾತನಾಡಿದ್ದೇವೆ. ಪ್ರತಿಪಕ್ಷಗಳು ಎತ್ತ ಬಹುದಾದ ವಿಷಯಗಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಅವರನ್ನು ಸಮರ್ಥವಾಗಿ ಎದುರಿಸಲು ಶಾಸಕರಿಗೆ ನೀಡಬೇಕಾದ ಸೂಚನೆಗಳ ಕುರಿತು ಚರ್ಚೆ ನಡೆದಿದೆ ಎಂದರು.

Call Now Button