ನವದೆಹಲಿ : ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸುಪ್ರೀಂ ಕೋರ್ಟ್ನಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ಮಂಗಳವಾರ ದೆಹಲಿಯ ನ್ಯಾಯಾಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಚಪ್ಪಲಿಯಿಂದ ಥಳಿಸಿದ್ದಾರೆ.
ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯ ಸಂಕೀರ್ಣದಲ್ಲಿ ಕೆಲವರು ತನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ರಾಕೇಶ್ ಕಿಶೋರ್ ಹೇಳಿಕೊಂಡಿದ್ದಾರೆ. ಹಲ್ಲೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಚಪ್ಪಲಿ ಏಟು ತಿಂದ ರಾಕೇಶ್ ಕಿಶೋರ್ ತನ್ನ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿಯನ್ನು ‘ನೀವು ಯಾರು ? ನನ್ನನ್ನು ಏಕೆ ಹೊಡೆಯುತ್ತಿದ್ದೀರಿ?’ ಎಂದು ಕೇಳುತ್ತಿರುವುದು ಕಂಡುಬರುತ್ತದೆ. ನಂತರ ಅವರು ‘ಸನಾತನ ಧರ್ಮಕ್ಕೆ ಜಯ’ ಎಂದು ಕೂಗುತ್ತಾರೆ. ಆದಾಗ್ಯೂ, ಈ ವಿಷಯದ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ಆದರೆ ಬಿ.ಆರ್ ಗವಾಯಿ ಮೇಲೆ ಶೂ ಎಸೆದಿದ್ದ ಕಾರಣಕ್ಕೆ ರಾಕೇಶ್ ಕಿಶೋರ್ ಮೇಲೆ ದಾಳಿ ಮಾಡಿದ ಹಿನ್ನಲ್ಲೆಯಲ್ಲಿ ಈ ಘಟನೆ ನಡೆದಿಯೇ ಅಥವಾ ಸಂಬಂಧ ಇಲ್ಲವೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಬೇಕಾಗಿದೆ.
ಈ ಹಿಂದೆ, ವಕೀಲ ರಾಕೇಶ್ ಕಿಶೋರ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಆದರೆ ದೇವರು ತಮ್ಮೊಂದಿಗಿದ್ದಾನೆ. ಆದ್ದರಿಂದ ಅವರಿಗೆ ಏನೂ ಆಗುವುದಿಲ್ಲ. ತಮ್ಮ ಮನೆಯಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ ಎಂದು ಅವರು ಹೇಳಿದರು. ಪೊಲೀಸರು ನನ್ನನ್ನು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು. ನನ್ನ ಜೀವ ಇನ್ನೂ ಅಪಾಯದಲ್ಲಿದೆ. ಭದ್ರತೆಯ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ ಎಂದು ಹೇಳಿದ್ದರು.


