ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಿಗೆ ಗೌರವ, ವಾರ್ಷಿಕ ಪ್ರಶಸ್ತಿ ಪ್ರದಾನ
ಮೈಸೂರು: ವಿಕಸಿತ ಭಾರತದಂತೆ ಮೈಸೂರು- ಕೊಡಗು ಸಹ ವಿಕಸಿತ ಕ್ಷೇತ್ರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಲಹೆ, ಮಾರ್ಗದರ್ಶನ, ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾವು ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿದಾಗ ಅನನುಭವಿಯಾಗಿದ್ದೆ. ಬಳಿಕ ಮಾಧ್ಯಮದವರು ನೀಡಿದ ಉಪಯುಕ್ತ ಸಲಹೆ, ಮಾರ್ಗದರ್ಶನ ಏನಾದರೂ ಸಾಧನೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ಇದೇ ವೇಳೆ ಕ್ಷೇತ್ರದ ಜನತೆಗೆ ಯೋಜನೆ ಜಾರಿಗೊಳಿಸುವ ವೇಳೆ, ಕಾರ್ಯಕ್ರಮ ರೂಪಿಸಿ ಅನುಷ್ಠಾನದ ವೇಳೆ ಅವರ ಧ್ವನಿಯಾಗಿ ಮಾಧ್ಯಮ ನಿಂತು ಲೋಪದೋಷ ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದೆ ಎಂದರು.
ಹೀಗಾಗಿ ಮೈಸೂರು- ಕೊಡಗು ಹೆದ್ದಾರಿ, ರೈಲ್ವೆ ಮಾರ್ಗ, ಯಾದವಗಿರಿಯಲ್ಲಿ ಹೊಸ ರೈಲು ನಿಲ್ದಾಣ ಭಾರತೀಯ ಭಾಷಾ ಸಂಸ್ಥಾನದಿಂದ ಕನ್ನಡಕ್ಕಾಗಿ ಪ್ರತ್ಯೇಕ ಅಧ್ಯಯನ ವ್ಯವಸ್ಥೆಯನ್ನು ಬೇರ್ಪಡಿಸಿ ಅಧ್ಯಯನಾ ವಿಸ್ತ್ರತಗೊಳಿಸುವುದು, ಹುಣಸೂರು, ಪಿರಯಾಪಟ್ಟಣ ಮೊದಲಾದ ಕಡೆಗಳಲ್ಲಿ ಕೃಷಿಕರಿಗೆ ಸವಲತ್ತು ವಿತರಣೆ ಮೊದಲಾದವು ಸಾಧ್ಯವಾಗುತ್ತಿವೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಅದು ಮೈಸೂರು ಪರಂಪರೆ, ಹಿತಾಸಕ್ತಿಗೆ ಅನುಗುಣವಾಗಿರಬೇಕು. ಜನರ ಜೀವನ ಸುಧಾರಣೆಯೇ ನಮಗೆ ಮುಖ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳೂ ಉಪಯುಕ್ತ ಸಲಹೆ ಮೂಲಕ – ಬೆಂಬಲಕ್ಕೆ ನಿಲ್ಲಬೇಕೆಂದು ಮನವಿ ಮಾಡಿದರು.
ಜೀವಪರವಾದ ಪತ್ರಿಕೋದ್ಯಮ ಬೇಕು
ಮೈಸೂರು: ಮಾಧ್ಯಮಗಳ ವಿಶ್ವಾಸಾರ್ಹತೆ ಸದಾ ಚರ್ಚೆಯಲ್ಲಿರುವ ವಿಷಯ. ಅಂದೂ ಈ ವಿಷಯ ಇತ್ತು, ಇಂದಿಗೂ ಇದೆ. ಆದ್ದರಿಂದ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ. ಈ ನಿಟ್ಟಿನಲ್ಲಿ ಜೀವ ಪರವಾದ ಪತ್ರಿಕೋದ್ಯಮಕ್ಕೆ ನಾನು ಮಹತ್ವ ನೀಡಬೇಕೆಂದು ನ್ಯೂಸ್ ೧೮ ಕನ್ನಡ ಸುದ್ದಿ ವಾಹಿನಿಯ ಸಂಪಾದಕ ಹರಿಪ್ರಸಾದ್ ಸಲಹೆ ನೀಡಿದರು.
ಬಾಯಿಂದ ಬಾಯಿಗೆ ಹರಡುವ ಸುದ್ದಿ ಯಾವ ಹಂತದಲ್ಲಾದರೂ ಸುಳ್ಳಾಗಿ ಬದಲಾಗಬಹುದು. ಅದ್ದರಿಂದ ಪತ್ರಿಕೆ ಮೂಲಕ ಸತ್ಯವನ್ನು ಜನರಿಗೆ ತಿಳಿಸಲು ಪತ್ರಿಕೆಯನ್ನು ಆರಂಭಿಸಿದ್ದೇವೆ ಎಂದು ಮೊದಲ ಕನ್ನಡ ಪತ್ರಿಕೆಯ ಸಂಪಾದಕರು ಹೇಳಿದ್ದರು. ಈಗಲೂ ಸಹ ಜನರಿಗೆ ಸತ್ಯವನ್ನು ಹೇಳುವ ಕೆಲಸ ಮಾಧ್ಯಮ ಮಾಡಬೇಕು. ಅದರಲ್ಲೂ ವಿದ್ಯುನ್ಮಾನ ಮಾಧ್ಯಮದಲ್ಲಿ ಒಮ್ಮೆ ಆಡಿದ ಮಾತು, ತೋರಿಸಿದ ಸುದ್ದಿ ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಪ್ರತಿಯೊಂದು ನಡೆ ನುಡಿ ನಿಯಂತ್ರಣದಲ್ಲಿರಬೇಕು ಎಂದು ತಿಳಿಸಿದರು.
ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಮಾತನಾಡಿ, ಮೈಸೂರು ಪತ್ರಿಕೋದ್ಯಮ ಕೂಡು ಕುಟುಂಬವಿದ್ದಂತೆ, ಇಲ್ಲಿ ವಿಭಿನ್ನವಾದ ಸವಾಲುಗಳಿವೆ. ಆದರೂ ಇತರರಿಗೆ ಆದರ್ಶವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಂಘದ ಅಧ್ಯಕ್ಷ ಕೆ. ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಇತರರಿದ್ದರು.

ಹಿರಿಯ ಪತ್ರಕರ್ತರಿಗೆ ಅಭಿನಂದನೆ: ಈ ವರ್ಷದ ಹಿರಿಯ ಪತ್ರಕರ್ತರ ಸಾಲಿನಲ್ಲಿ ಜಸ್ಟ್ ಕನ್ನಡ ವೆಬ್ ಮಾಧ್ಯಮದ ಮುಖ್ಯಸ್ಥರಾದ ಕೊಳ್ಳೇಗಾಲ ಮಹೇಶ್, ಗ್ರಾಮೀಣ ಭಾಗದಿಂದ ಆಂದೋಲನ ದಿನಪತ್ರಿಕೆಯ ಸಾದಿಕ್ ಪಾಷ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಉದಯ್ ಶಂಕರ್, ಉಪ ಸಂಪಾದಕರ ವಿಭಾಗದಿಂದ ವಿಜಯ ಕರ್ನಾಟಕ ಪತ್ರಿಕೆಯ ಮಂಜುನಾಥ ಸ್ವಾಮಿ, ವಿದ್ಯುನ್ಮಾನ ಮಾಧ್ಯಮ ವಿಭಾಗದಿಂದ ಸುರ್ವಣ ನ್ಯೂಸ್ ಚಾನಲ್ನ ಜಿಲ್ಲಾ ವರದಿಗಾರ ಮಧುಸೂದನ್, ಟಿವಿ ೯ ವಿಡಿಯೋಗ್ರಾಫರ್ ಪ್ರಮೋದ್ ಪ್ರಭು ಹಾಗೆಯೇ ಪ್ರತಿಷ್ಠಿತ ಟಿಎನ್ಐಟಿ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಪತ್ರಕರ್ತರಾದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರರಾದ ರವಿ ಪಾಂಡವಪುರ ಮತ್ತು ಟಿವಿ 9 ವಾಹಿನಿಯ ಜಿಲ್ಲಾ ವರದಿಗಾರರಾದ ರಾಮ್ ಅವರನ್ನು ಅಭಿನಂದಿಸಲಾಯಿತು.
ಏಳು ಮಂದಿಗೆ ವಾರ್ಷಿಕ ಪ್ರಶಸ್ತಿ: ಈ ಸಾಲಿನ ಅತ್ಯುತ್ತಮ ಕನ್ನಡ ವರದಿಗಾರಿಕೆ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ದಾ.ರಾ.ಮಹೇಶ್, ಇಂಗ್ಲಿಷ್ ವರದಿಗಾರಿಕೆಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ವರದಿಗಾರ ಎ. ಗಣೇಶ್, ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಎಸ್.ಆರ್. ಮಧುಸೂದನ್, ದೃಶ್ಯ ಮಾಧ್ಯಮ ವಿಭಾಗದಲ್ಲಿ ನ್ಯೂಸ್ 18 ವಾಹಿನಿಯ ಕೆ.ಎಸ್. ಆನಂದ ಮತ್ತು ವಿಡಿಯೋಗ್ರಫರ್ ಪಿ. ರಾಹುಲ್ ಹಾಗೂ ಇಂಡಿಯನ್ ಟಿವಿ ವರದಿಗಾರ ಚಂದನ್ ಬಲರಾಮ ಮತ್ತು ವಿಡಿಯೋಗ್ರಫರ್ ಎಲ್. ಸತೀಶ್ ಅವರಿಗೆ ಪ್ರಶಸ್ತಿ ಲಭಿಸಿದ್ದು ಇವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.



