ಸಿಎಂ ಮತ್ತು ಡಿಸಿಎಂ ಜತೆ ಹೈಕಮಾಂಡ್ ಚರ್ಚೆ ಸಾಧ್ಯತೆ
ಬೆಂಗಳೂರು: ಕಳೆದ ಹಲವು ದಿನಗಳಿಂದ ಬೆಂಗಳೂರು, ಬೆಳಗಾವಿಗೆ ಸೀಮಿತಗೊಂಡಿದ್ದ ರಾಜ್ಯ ಕಾಂಗ್ರೆಸ್ನಲ್ಲಿನ `ನಾಯಕತ್ವ ಬದಲಾವಣೆ’ ಕೂಗು ಮತ್ತು ಕಿತ್ತಾಟ ಇದೀಗ ದೇಶದ ರಾಜಧಾನಿ ತಲುಪಿದೆ. ಈನಡುವೆ, ಇಂದೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಬಾಯಿ ಹರಿಬಿಟ್ಟಿದ್ದು ತಮ್ಮ ತಮ್ಮ ನಾಯಕರ ಪರ ಹೇಳಿಕೆಗಳನ್ನು ನೀಡುವುದರ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದನ್ನು ಸಾಭೀತು ಪಡಿಸಿದ್ದಾರೆ.
ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿ ತಲುಪಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಪಯಣ ಬೆಳೆಸುವರು. ಸಿಎಂ ಭೇಟಿಗೂ ಮೊದಲೇ ಡಿಸಿಎಂ ದೆಹಲಿ ತಲುಪಿರುವುದು ಕುತೂಹಲ ಕೆರಳಿಸಿದೆ. ರಾಜ್ಯ ರಾಜಕಾರಣಕ್ಕೂ ದೆಹಲಿ ಭೇಟಿಗೂ ರಾಜ್ಯ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಓಟ್ ಚೋರಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಇಡೀ ದಿನ ಉತ್ತರ ಕರ್ನಾಟಕದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ, ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ, ಜನವರಿ 6ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, `ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಿದ್ದೇನೆ’ ಎಂದಷ್ಟೇ ಪುನರ್ ಸ್ಪಷ್ಟಪಡಿಸಿದರು.

ಜ.6ಕ್ಕೆ ಡಿಕೆಶಿ ಪ್ರಮಾಣ ವಚನ:
ರಾಮನಗರ: ` ನಾನು ಅಂದೂ ಹೇಳಿದ್ದೇನೆ, ಇಂದೂ ಹೇಳುತ್ತಿದ್ದೇನೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ. ಜನವರಿ 6ಕ್ಕೆ ಪ್ರಮಾಣ ವಚನ ಸ್ವೀಕರಿಸುತ್ತಾರೆ’ ಹೀಗೆ ಹೇಳಿಕೆ ನೀಡಿ ಕಿಡಿ ಹಚ್ಚಿದವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್. ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ದೂರವಿಲ್ಲ. ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದರು.
ಮೊನ್ನೆಯಷ್ಟೇ ಸಿಎಂ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು `ನಮ್ಮ ತಂದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ’ ಎಂದು ಹೇಳುವ ಮೂಲಕ ಕದನ ವಿರಾಮಕ್ಕೆ ಮತ್ತೆ ಚಾಲನೆ ನೀಡಿದ್ದರು. ಇದೀಗ ಇಕ್ಬಾಲ್ ಹುಸೇನ್ ಪದೇ ಪದೇ ಡಿ.ಕೆ.ಶಿವಕುಮಾರ್ ಪರ ಹೇಳಿಕೆಗಳನ್ನು ನೀಡುವುದ ಮೂಲಕ ಸುದ್ದಿಯಾಗುತ್ತಿದ್ದಾರೆ.
ಅವನ ಮಾತನ್ನು ನಂಬಬೇಡಿ: ಡಿಕೆಶಿ `ಅವನಿಗೆ ತಲೆ ಕೆಟ್ಟಿದೆ, ಅವನ ಮಾತನ್ನು ನಂಬಬೇಡಿ, ನನ್ನ ಪರವಾಗಿ ಯಾರೂ ಮಾತನಾಡುವ ಅಗತ್ಯ ಇಲ್ಲ.
ಯಾರ ಮಾತಿಗೂ ಮಹತ್ವ ಕೊಡಬೇಡಿ, ಎಲ್ಲವನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ’
– ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಇದೀಗ ರಾಜ್ಯ ರಾಜಕಾರಣದ ಬಿಕ್ಕಟ್ಟು ದೆಹಲಿ ಅಂಗಳ ತಲುಪಿದ್ದು ಉಭಯ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿ `ನಾಯಕತ್ವ ಬದಲಾವಣೆ’ ಕಿತ್ತಾಟಕ್ಕೆ ತೆರೆಳೆಯಬೇಕೆಂಬ ಅಭಿಪ್ರಾಯ ಬಹುತೇಕ ಕಾಂಗ್ರೆಸ್ ಶಾಸಕರದ್ದಾಗಿದ್ದು, ಇದಕ್ಕಾಗಿ ದೆಹಲಿಯಿಂದ ಸ್ಪಷ್ಟ ಸಂದೇಶದ ನಿರೀಕ್ಷೆಯೂ ಇದೆ. ಈನಡುವೆ, ಅನೇಕ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಗುಂಪು ಪ್ರತ್ಯೇಕವಾಗಿ ದೆಹಲಿ ತಲುಪಿದ್ದು, ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳುವ ಸಾಧ್ಯತೆ ಇದೆ.


