ನಾಯಕತ್ವ ಬದಲಾವಣೆ ಮಾಧ್ಯಮದಲ್ಲಿ ಹೆಚ್ಚು ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ
ಮೈಸೂರು: ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿಯಾಗಿದೆ, ಇದರ ಬಗ್ಗೆ ಹೆಚ್ಚು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ, ವಿಧಾನಸಭೆಯಲ್ಲಿ ಹೇಳಿದ ಮೇಲೂ ಮತ್ತೆ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀರ್ಮಾನಿಸಬೇಕು. ನಾನು ಈ ಬಗ್ಗೆ ವರಿಷ್ಟರ ಬಳಿ ಮಾತನಾಡಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ನಾವೇ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಖರ್ಗೆ ಮಾತನ್ನು ಒಪ್ಪಬೇಕಾದ ವಿಚಾರ. ಯಾರೂ ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಒನ್ಸ್ ಫಾರ್ ಆಲ್ ಕ್ಲಿಯರ್ ಮಾಡುತ್ತಿದ್ದೇನೆ ಕೇಳಿ ಎಂದು ಸಿಎಂ ಸ್ಪಷ್ಟಪಡಿಸಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ನಿನ್ನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದರು. ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂದು ಡಿಸಿಎಂ ಹೇಳಿಕೆಗೆ ʻ ಅಧಿಕಾರದಲ್ಲಿದ್ದಾಗ ನಾನು ಮಾಡಿದೆ, ಅವರು ಮಾಡಿದರು ಎನ್ನುವುದು ಮುಖ್ಯವಲ್ಲ. ಅದರ ಪ್ರಶ್ನೆಯೇ ಇಲ್ಲ. ಎಸ್.ಎಂ ಕೃಷ್ಣ ಅವರು ಆಗ ಮುಖ್ಯಮಂತ್ತಿಯಾಗಿದ್ದರು. ಅವರ ಸರಕಾರ ಮಾಡಿತ್ತು ಎಂದರು.
ದ್ವೇಷ ಮಾಡುವವರಿಂದ ವಿರೋಧ:
ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷನ ನಿರ್ಭಂದ ವಿಧೇಯಕವನ್ನು ವೀರೋಧಿಸುತ್ತಾರೆ. ಪ್ರಚೋದನಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ. ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ ? ಇತ್ತೀಚೆಗೆ ದ್ವೇಷ ಭಾಷಣ ಹೆಚ್ಚಾಗುತ್ತಿರುವುದರಿಂದಲೇ ಈ ವಿಧೇಯಕವನ್ನು ರೂಪಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದಕ್ಕು ಮುನ್ನ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ವಿಚಾರಿಸಿದರು ನಂತರ ಅಗ್ರಹಾರದಲ್ಲಿರುವ ಮೈಲಾರಿ ಹೊಟೇಲ್ಗೆ ತೆರಳಿ ಉಪಹಾರ ಸೇವಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಎಂ.ಕೆ.ಸೋಮಶೇಖರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಗರಪೊಲೀಸ್ ಆಯುಕ್ತರಾದ ಸೀಮಾ ಲಾಕ್ಟರ್ ಉಪಸ್ಥಿತರಿದ್ದರು.


