ಮೈಸೂರು : ಆಧುನಿಕ ಯುಗದ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿಗೆ ಹೃದಯಾಘಾತದ ಪ್ರಕರಣ ಹೆಚ್ಚಾಗಿ ಸಂಭವಿಸುತ್ತಿರುವುದು ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರ ಡಾ. ಕೆ.ಎಸ್. ಸದಾನಂದ ಕಳವಳ ವ್ಯಕ್ತಪಡಿಸಿದ್ದಾರೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಪತ್ರಕರ್ತರಿಗೆ ಆಯೋಜಿಸಿದ್ದ ಹೃದ್ರೋಗ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಇಂದು ಬಿಪಿ, ಶುಗರ್, ಕೊಲೆಸ್ಟ್ರಾಲ್ ಪ್ರಕರಣ ಸರ್ವೆ ಸಾಮಾನ್ಯವಾಗಿದ್ದು ಇದರಿಂದ ಹೃದ್ರೋಗ ಕಾಯಿಲೆ ಹೆಚ್ಚು ಕಂಡುಬರುತ್ತಿದೆ. ಅದರಲ್ಲೂ ಸಣ್ಣ ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಎಲ್ಲ ವಯಸ್ಕರರೂ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದ್ದರಿಂದ ಇಂತಹ ಶಿಬಿರಗಳು ಅತ್ಯಂತ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಪತ್ರಕರ್ತರ ವೃತ್ತಿಯ ಶೈಲಿ ಬದಲಾದಂತೆ ಜೀವನ ಶೈಲಿಯೂ ಬದಲಾಗುತ್ತಿದೆ. ಇದರಿಂದ ಪತ್ರಕರ್ತರ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದ್ದು, ದಿನದಿಂದ ದಿನಕ್ಕೆ ಪತ್ರಕರ್ತರ ಅಕಾಲಿಕ ಮರಣ ಸಂಭವಿಸುತ್ತಿದೆ. ಇದನ್ನು ಮನಗಂಡು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಹೃದ್ರೋಗ ತಪಾಸಣಾ ಶಿಬಿರದಲ್ಲಿ ಜಿಲ್ಲಾದ್ಯಂತ 150ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು. ಡಾ. ಪಶುಪತಿ, ಹೃದ್ರೋಗ ತಜ್ಞರಾದ ಡಾ. ಶಶಿಕಾಂತ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮೀಣ ಕಾರ್ಯದರ್ಶಿ ದಾರಾ ಮಹೇಶ್, ಹೆಚ್.ಎಸ್.ವೆಂಕಟಪ್ಪ ಹಾಜರಿದ್ದರು.


