ಮೈಸೂರು: ನಗರದ ಅರಮನೆ ಮುಂಭಾಗ ಬಲೂನ್ ಗ್ಯಾಸ್ ಸಿಲೆಂಡರ್ ಸ್ಪೋಟದಲ್ಲಿ ಗಾಯಗೊಂಡು ನಿನ್ನೆ ಮರಣ ಹೊಂದಿದ ಲಕ್ಷ್ಮೀ ಅವರ ಅಣ್ಣ ಇಂದು ಮೃತಪಟ್ಟಿರುವ ಹೃದಯ ಕಲಕುವ ಘಟನೆ ಜರುಗಿದೆ. ತಂಗಿಯ ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾದ ಪರಮೇಶ್ ಮೃತಪಟ್ಟ ವ್ಯಕ್ತಿ. ಇವರಿಗೆ ೬೦ ವರ್ಷ ವಯಸ್ಸಾಗಿತ್ತು. ೨೪ ಗಂಟೆಗಳಲ್ಲಿ ತಂಗಿ-ಅಣ್ಣನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಡಿ.೨೫ರಂದು ರಾತ್ರಿ ೮.೩೦ರ ವೇಳೆ ಅರಮನೆ ನೋಡಲು ಬಂದಿದ್ದ ನಂಜನಗೂಡು ತಾಲೂಕಿನ ನಿವಾಸಿ ಲಕ್ಷ್ಮೀ ಬಲೂನ್ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿದ್ದು, ಗಾಯಗೊಂಡ ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲೂನ್ ಮಾರಾಟ ಮಾಡುತ್ತಿದ್ದ ಸಲೀಂ ಎಂಬಾತ ಸ್ಥಳದಲ್ಲೇ ಛಿದ್ರಗೊಂಡು ಮೃತಪಟ್ಟಿದ್ದಾರೆ. ಲಕ್ಷ್ಮೀ ಎಂಬುವರು ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದರು. ಸದ್ಯ ಸಲೀಂನ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಿ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ.
ಈನಡುವೆ, ನಿನ್ನೆ ಮೃತಪಟ್ಟ ಲಕ್ಷ್ಮೀಯ ಸುದ್ದಿ ಕೇಳಿದ ಅಣ್ಣ ಪರಮೇಶ್ ಅಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.


