- ಅಗಲಿದ ಮೇಲೂ ನಿಜ ಅಭಿಮಾನಿಗಳನ್ನು ಹೊಂದಿರುವ ರಾಜಕಾರಣಿ ಆರ್. ಧ್ರುವನಾರಾಯಣ್
- ದಿ.ಆರ್.ಧ್ರುವನಾರಾಯಣ್ ಅಭಿಮಾನಿಗಳ ಬಳಗದಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ
ಮೈಸೂರು: ಇಂದಿನ ರಾಜಕಾರಣದಲ್ಲಿ ನಾಯಿಗೆ ಅಧಿಕಾರ ಕೊಟ್ಟರೆ, ಆ ನಾಯಿಗೂ ಜೈಕಾರ ಹಾಕುವ ಕಾಲವಿದು. ಆದರೆ, ಅಧಿಕಾರ ಇಲ್ಲದಿದ್ದಾಗಲೂ ಅಭಿಮಾನಿಗಳನ್ನು ಸಂಪಾದಿಸಿ, ಸತ್ತ ಮೇಲೂ ಅಭಿಮಾನಿಗಳನ್ನು ಹೊಂದಿರುವವರೇ ನಿಜವಾದ ನಾಯಕರು. ಅಂತವರ ಸಾಲಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.
ನಂಜನಗೂಡಿನ ದಿ. ಆರ್. ಧ್ರುವನಾರಾಯಣ್ ಅಭಿಮಾನಿಗಳ ಬಳಗದ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್. ಧ್ರುವನಾರಾಯಣ್ ಅವರಿಗೆ ಕೇವಲ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳು ಇದ್ದರು. ಅವರ ಅಗಲಿಕೆಯ ನಂತರ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸುವ ನಾಯಕರಿಲ್ಲದಂತ್ತಾಗಿದೆ ಎಂದು ವಿಷಾದಿಸಿದರು.
ಎಲ್ಲರೂ ತಾವೇ ನಾಯಕರಾಗಬೇಕೆಂದು ಹಂಬಲಿಸುವ ಇಂದಿನ ಸ್ವಾರ್ಥ ರಾಜಕೀಯದಲ್ಲಿ ಯುವ ನಾಯಕರನ್ನು ಸೃಷ್ಟಿಸಲು ಹೊರಟವರು ಧ್ರುವನಾರಾಯಣ್. ನಾನು ಪತ್ರಕರ್ತನಾಗಿ ರಾಜಕಾರಣಿಗಳಿಂದ ಅಂತರ ಕಾಪಾಡಿಕೊಂಡಿದ್ದರೂ, ಧ್ರುವನಾರಾಯಣ್ ಅವರ ಜನಪರ ಕಾಳಜಿ, ದೂರದೃಷ್ಟಿ, ನಡೆನುಡಿಗಳಿಂದ ಆಕರ್ಷಿತನಾಗಿ ಅವರಂತವರು ರಾಜ್ಯಕ್ಕೆ ಮತ್ತು ರಾಜಕಾರಣಕ್ಕೆ ಬೇಕು ಎಂದು ಬಯಸಿದ್ದ ಹಿತೈಶಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಸಭ್ಯ ರಾಜಕಾರಣದ ಅಸ್ಮಿತೆಯಾಗಿದ್ದ ಆರ್. ಧ್ರುವನಾರಾಯಣ್ ಅವಂತಹ ನಾಯಕರು ಕರ್ನಾಟಕದ ರಾಜಕಾರಣಕ್ಕೆ ಅಗತ್ಯವಿತ್ತು ಎಂದು ನುಡಿದರು.
ಅಂಕಣಕಾರ ನಾ. ದಿವಾಕರ್ ಮಾತನಾಡಿ, ಆರ್. ಧ್ರುವನಾರಾಯಣ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜಕಾರಣ ಮಾಡುವ ಗುಣ ಉಳ್ಳವರಾಗಿದ್ದರು. ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು. ಅವರು ಅಗಲಿಕೆ ರಾಜ್ಯಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ ಎಂದು ನುಡಿದರು.
ಪ್ರಗತಿಪರ ಚಿಂತಕ ಶಬೀರ್ ಮುಸ್ತಾಫ ಮಾತನಾಡಿ, ಪ್ರತಿ ತಿಂಗಳೂ ವಿವಿಧ ಕ್ಷೇತ್ರದ ಗಣ್ಯರು, ವಿಚಾರವಂತ್ತರು, ಹೋರಾಟಗಾರರು, ಬುದ್ಧಿ ಜೀವಿಗಳನ್ನು ಒಂದೆಡೆ ಸೇರಿಸಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆಗಳನ್ನು ಮಾಡಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದ ಅಪರೂಪದ ರಾಜಕಾರಣಿ ಆರ್. ಧ್ರುವನಾರಾಯಣ್. ಎಲ್ಲ ಬಗೆಯ ರಾಜಕೀಯ ಸನ್ನಿವೇಶಗಳನ್ನು ಸರಿಯಾದ ವಿಶ್ಲೇಷಣೆ ಮಾಡುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸೋಮೇಶ್, ದಿ.ಆರ್. ಧ್ರುವನಾರಾಯಣ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮಹೇಂದ್ರ ಕುಮಾರ್, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೇಮಂತ್ ಮತ್ತು ಅಭಿಮಾನಿಗಳು ಹಾಜರಿದ್ದರು.


