ಚಾಮರಾಜನಗರ: ತಾಲೂಕಿನ ಹೊಮ್ಮ ಗ್ರಾಮದ ಬಳಿ ವಿಷಪ್ರಾಶನದಿಂದ ಗಂಡು ಚಿರತೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಹೊಮ್ಮ ಗ್ರಾಮದ ದೊರೆಸ್ವಾಮಿ (60) ಬಂಧಿತ ಆರೋಪಿ. ಶನಿವಾರ ಹೊಮ್ಮ ಗ್ರಾಮದ ಬಳಿಯ ಜಮೀನೊಂದರಲ್ಲಿ 5 ರಿಂದ 6 ವಯಸ್ಸಿನ ಗಂಡು ಚಿರತೆಯ ಕಳೇಬರ ಪತ್ತೆಯಾ ಗಿತ್ತು. ಚಿರತೆ ಮೃತದೇಹ ಇದ್ದ ಸ್ವಲ್ಪ ದೂರದಲ್ಲಿಯೇ ಕರುವಿನ ಮೃತದೇಹವೂ ಸಿಕ್ಕಿತ್ತು.
ವಿಷಪ್ರಾಶನದಿಂದಲೇ ಚಿರತೆ ಮೃತಪಟ್ಟಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕರುವಿನ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚಿರತೆ ಕೊಂದಿದ್ದ ಕರುವಿಗೆ ವಿಷ ಹಾಕಿದ್ದರಿಂದ ಅದನ್ನು ತಿಂದ ಚಿರತೆ ಮೃತಪಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಚಾಮರಾಜನಗರ ವಲಯ ಅರಣ್ಯಾಧಿಕಾರಿಗಳು ದೊರೆಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


