ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಬಳಿ ಗುರುವಾರ ರಾತ್ರಿ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.
ಕಳೆದ ತಿಂಗಳು ನಂಜೇದೇವನಪುರದಲ್ಲಿ ತಾಯಿ ಹುಲಿ ಹಾಗೂ 4 ಮರಿ ಹುಲಿಗಳ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. 5 ಹುಲಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನು ಅಳವಡಿಸಿದ್ದಲ್ಲದೇ ಆನೆಗಳ ಮೂಲಕ ಕೂಂಬಿಂಗ್ ಸಹ ನಡೆಸಿತ್ತು. ಆದರೆ, 5 ಹುಲಿಗಳು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಜ.9 ರಂದು ತಾಯಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ನಂತರ ನಾಲ್ಕು ಹುಲಿ ಮರಿಗಳನ್ನು ಸೆರೆ ಹಿಡಿಯುವ ಕಾರ್ಯ ಮುಂದುವರಿದಿತ್ತು.
ಇದೀಗ ನಾಲ್ಕು ಹುಲಿ ಮರಿಗಳ ಪೈಕಿ ಒಂದು ಹೆಣ್ಣು ಹುಲಿ ಮರಿಯನ್ನು ಸೆರೆಹಿಡಿಯಲಾಗಿದ್ದು, ಅದರ ವಯಸ್ಸು ಅಂದಾಜು 10 ತಿಂಗಳಾಗಿರುತ್ತದೆ. ಸೆರೆಹಿಡಿದ ಹುಲಿ ಮರಿಯನ್ನು ಸುರಕ್ಷಿತ ಸ್ಥಳದಲ್ಲಿ ಇಡಲಾಗಿದ್ದು, ಅದರ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರ ನಿಗಾವಹಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಉಳಿದ ಮೂರು ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಇಲಾಖೆಯ ಇಬ್ಬರು ಪಶು ವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ ನಾಲ್ಕು ಸಾಕಾನೆಗಳು, ಅರಣ್ಯ ಇಲಾಖೆಯ ಡ್ರೋನ್ ತಂಡಗಳು ಹಾಗೂ ಅಧಿಕಾರಿ,–ಸಿಬ್ಬಂದಿಗಳು ಭಾಗವಹಿಸಿದ್ದರು.
ಗ್ರಾಮಸ್ಥರ ಸುರಕ್ಷತೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.


