ಮೈಸೂರು: ತಾಲೂಕಿನ ವರುಣಾ ಹೋಬಳಿಯ ಗುಡೆಮಾದನಹಳ್ಳಿಯಲ್ಲಿ ಜಮೀನು ಪರಿಶೀಲನೆಗೆ ತೆರಳಿದ್ದ ಸರಕಾರಿ ಮಹಿಳಾ ಅಧಿಕಾರಿ ಮತ್ತು ಗ್ರಾಮ ಸಹಾಯಕರನ್ನು ವ್ಯಕ್ತಿಯೋರ್ವ ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಜರುಗಿದ್ದು ಈ ಸಂಬಂಧ ಗ್ರಾಮಾಂತರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಡಿಸೆಂಬರ್ ೩೧ರಂದು ಜಮೀನು ಪರಿಶೀಲನೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬುವರನ್ನು ಇದೇ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಎಂಬಾತ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಹಲ್ಲೆಗೂ ಯತ್ನಿಸಿದ್ದಾರೆ. ಈ ಕೃತ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ನಿಮ್ಹಾನ್ಸ್ ಮಾದರಿ ಆಸ್ಪತ್ರೆ ನಿರ್ಮಾಣ ಮಾಡಲು ಗುಡಮಾದನಹಳ್ಳಿಯಲ್ಲಿ ಜಮೀನು ಸರ್ವೆ ಮಾಡಲು ಸಿಬ್ಬಂದಿಗಳು ಮುಂದಾದಾಗ, ಆರೋಪಿ ಪುಟ್ಟಸ್ವಾಮಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದು ಬೆಳಕಿಗೆ ಬಂತು. ಅಧಿಕಾರಿಗಳ ದಿಢೀರ್ ಭೇಟಿಯಿಂದ ಕಂಗಾಲಾದ ಪುಟ್ಟಸ್ವಾಮಿ, ನಮ್ಮ ಜಮೀನನ್ನು ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡೋದಕ್ಕೆ ಗುರುತಿಸಿರುವ ತಹಶೀಲ್ದಾರ್ ತಲೆ ತೆಗಿಬೇಕು ಅವಾಜ್ ಹಾಕಿದ್ದಾನೆ.
ಈಗ ನೀವು ಬಂದಿದ್ದೀರಿ. ನಿಮ್ಮನ್ನು ಕೊಂದು ಹಾಕುತ್ತೇನೆ. ಈತನ ವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರಿಸಲು ಮುಂದಾದ ಗ್ರಾಮ ಸಹಾಯಕ ನವೀನ್‌ಕುಮಾರ್ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಮೊಬೈಲ್ ಕಿತ್ತುಕೊಂಡಿದ್ದಾನೆ. ಮೊಬೈಲ್‌ನಲ್ಲಿ ಇದ್ದ ಕೆಲ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾನೆ.
ಸರಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಹಲ್ಲೆಗೂ ಯತ್ನಿಸಿದ ಪುಟ್ಟಸ್ವಾಮಿಯಿಂದ ರಕ್ಷಣೆ ಮತ್ತು ಆದ ದಾಳಿಯ ಬಗ್ಗೆ ದಕ್ಷಿಣ ವಲಯ ಪೊಲೀಸ್ ಠಾಣೆಯಲ್ಲಿ ಭವ್ಯಾ ಜಿ ಅವರು ದೂರು ನೀಡಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.


