ಮೈಸೂರು: `ನಾನು ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದೀನಿ, ಜೆಡಿಎಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೀನಿ, ಈಗಲೂ ಜೆಡಿಎಸ್ ಪಕ್ಷದಲ್ಲೇ ಇದ್ದೀನಿ, ಒಂದು ಹೆಜ್ಜೆಯೂ ಪಕ್ಷದಿಂದ ಹೊರಗೆ ಹಾಕಿಲ್ಲ’. ಹೀಗೆ ಕಡ್ಡಿ ತುಂಡಾಗುವಂತೆ ಮಾತನಾಡಿದವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ.
ತಮ್ಮ ಅನುಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆದಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾರಿಗೂ ದ್ರೋಹ ಮಾಡುವ ಬುದ್ದಿ ಇಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮೇಲೆ ಜೆಡಿಎಸ್ ಪಕ್ಷದ ಹೊಣೆಗಾರಿಕೆಯನ್ನು ತೆಗೆದುಕೊಂಡು ಮೈಸೂರು ಭಾಗದಲ್ಲಿ ಪಕ್ಷವನ್ನು ಕಟ್ಟಿದ್ದೀನಿ. ನಾನು ಜೆಡಿಎಸ್ನಿಂದ ಗೆದ್ದಿದ್ದೀನಿ. ಜೆಡಿಎಸ್ನಲ್ಲಿ ಗಟ್ಟಿಯಾಗಿ ಇದ್ದೀನಿ. ಜೆಡಿಎಸ್ನಲ್ಲಿಯೇ ಇರುತ್ತೇನೆ ಎಂದು ನುಡಿದರು.
ನಾನು ಜೆಡಿಎಸ್ ವರಿಷ್ಠರ ಬಗ್ಗೆ ಯಾವತ್ತೂ ಟೀಕೆ ಮಾಡಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದ್ದು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೀನಿ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಇನ್ನೂ ಎರಡೂವರೆ ವರ್ಷವಿದೆ. ಚುನಾವಣೆ ಬಂದಾಗ ಬೇರೆ ವಿಚಾರ ಚರ್ಚೆ ಮಾಡೋಣ. ಪಕ್ಷದಲ್ಲಿ ನಡೆದಿರುವ ಕೆಲ ಬೆಳವಣಿಗೆಗಳಿಂದ ನನಗೆ ನೋವಾಗಿರುವುದು ನಿಜ. ಆದರೆ, ಒಳ್ಳೆಯ ದಿನ ಬಂದಾಗ ಎಲ್ಲವೂ ಸರಿ ಹೋಗುತ್ತೆ ಎಂದು ತಿಳಿಸಿದ್ದಾರೆ.
ಚಾಮುಂಡೇಶ್ವರಿಯಿಂದ ಸಾರಾ ಮಹೇಶ್ ಸ್ಪರ್ಧೆ:
ಈನಡುವೆ, ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಜಾತ್ಯಾತೀತ ಜನತಾದಳ ಪಕ್ಷ ಮತ್ತು ನಾಯಕರಿಂದ ಅಂತರ ಕಾಪಾಡಿಕೊಂಡಿರುವ ಹಿನ್ನಲ್ಲೆಯಲ್ಲಿ ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಶಾಸಕ ಸಾ.ರಾ.ಮಹೇಶ್ ಅವರನ್ನು ಕಣಕ್ಕಿಳಿಸಲು ಪಕ್ಷದ ವೇದಿಕೆಯಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಸಂಬಂಧ ಬೆಂಗಳೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಗಿದೆ.


