ಹುಣಸೂರು: ಕಳೆದ ಡಿಸೆಂಬರ್ 28ರಂದು ಐದು ಮಂದಿ ಮುಸುಕುಧಾರಿಗಳು ಕೈಯಲ್ಲಿ ಪಿಸ್ತೂಲು ಹಿಡಿದು ಇಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ಗೆ ನುಗ್ಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರಾಜ್ಯ ದಡೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ತಲೆ ಮರೆಸಿಕೊಂಡಿರುವ ಮೂವರಿಗಾಗಿ ಶೋಧನೆ ಮುಂದುವರೆದಿದೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬಂಧಿತರು ದೆಹಲಿಯ ಜೇತ್ಪುರ್, ಹರಿನಗರದ ನಿವಾಸಿ ರಿಷಿಕೇಶ್ ಕುಮಾರ್ ಸಿಂಗ್ ಮತ್ತು ಬಿಹಾರ ರಾಜ್ಯದ ಬಾಗಲ್ಪುರ ಜಿಲ್ಲಯ ನಿವಾಸಿ ಪಂಕಜ್ ಕುಮಾರ್ ಎಂಬು ಗುರುತಿಸಲಾಗಿದೆ. ಆರೋಪಿತರು ದರೋಡೆ ಮಾಡಿದ್ದ 12.5 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 92 ಸಾವಿರ ರೂ. ನಗದು, ಸ್ಕೈ ಗೋಲ್ಡ್ ಎಂಬ ಚಿಹ್ನೆ ಇರುವ ಒಂದು ಬಾಕ್ಸ್ ಹಾಗೂ ಕೃತ್ಯಕ್ಕೆ ಬಳಸಿದ್ದ ರಾಯಲ್ ಎನ್ಫೀಲ್ಡನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳಿಗಾಗಿ ಶೋಧನೆ ನಡೆದಿದೆ.
ಡಿ.28ರ ಮಧ್ಯಾಹ್ನ 2.04ರಲ್ಲಿ ಮುಖಕ್ಕೆ ಮುಸುಕು, ತಲೆಗೆ ಹೆಲ್ಮೆಟ್, ಕೈಯಲ್ಲಿ ಪಿಸ್ತೂಲು ಹಿಡಿದು ಬಂದ ಐದು ಮಂದಿ ಡಕಾಯತರು, ಚಿನ್ನಾಭರಣದ ಅಂಗಡಿಯಲ್ಲಿದ್ದ 450 ವಿವಿಧ ಮಾದರಿಯ 8034 ಗ್ರಾಂ, 200 ಮಿಲಿ ತೂಕವಿರುವ ಅಂದಾಜು 10 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಅಂಗಡಿ ಮಾಲೀಕ ಸೈನುದ್ದೀನ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಐದು ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ಪೈಕಿ ಪೊಲೀಸ್ ನಿರೀಕ್ಷಕ ಸಂತೋಷ್ ಕಶ್ಯಪ್, ಟಿ.ಎಂ. ಪುನೀತ್, ಪಿ.ಎಸ್ಐ ಅಜಯ್ ಕುಮಾರ್ ನೇತೃತ್ವದ ತಂಡ ಬಿಹಾರ ರಾಜ್ಯ ಪೊಲೀಸರ ನೆರವಿನೊಂದಿಗೆ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಆದರೆ, ಕಳುವಾದ ಚಿನ್ನಾಭರಣದ ಪೈಕಿ ಅತ್ಯಲ್ಪ ಪ್ರಮಾಣದ ಮಾಲು ವಶಪಡಿಸಿಕೊಂಡಿದ್ದು ಇನ್ನೂ 10 ಕೋಟಿ ರೂ. ಚಿನ್ನಾಭರಣ ಪತ್ತೆಯಾಗಬೇಕಿದೆ.


