ಪಿರಿಯಾಪಟ್ಟಣ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದು ಇದನ್ನು ಪ್ರೋತ್ಸಾಹಿಸಲು ಶಾಲಾ ವಾರ್ಷಿಕೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಸಿ ಆರ್ ಪಿ ಮಹೇಂದ್ರ ತಿಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನಡೆಯುವ ಪ್ರತಿಭಾ ಕಾರಂಜಿ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಆದರೆ ಶಾಲಾ ವಾರ್ಷಿಕೋತ್ಸವ ಎಲ್ಲಾ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯಲು ಸೂಕ್ತ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಇದನ್ನು ಪ್ರೋತ್ಸಾಹಿಸಬೇಕಾದದ್ದು ಶಿಕ್ಷಕರು ಮತ್ತು ಪೋಷಕರ ಆದ್ಯ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಕರಿದ್ದು ಉತ್ತಮ ಬೋಧನೆಯೂ ನಡೆಯುತ್ತಿರುವುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವಂತೆ ಮನವಿ ಮಾಡಿದರು. ಕೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವರದೇಶ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಇದನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಮಹದೇವ್ ಗೋವಿಂದ್ ರಾಜ್, ಶಿಕ್ಷಕರಾದ ಮಂಜುನಾಥ್, ನಾಗಲಕ್ಷ್ಮಿ, ಚಾಂದಿನಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ಎನ್ ಸುರೇಶ್, ಶ್ರೀನಿವಾಸ್ ಗೌಡ, ಉಪಾಧ್ಯಕ್ಷ ಸುನಿತಾ ಜಯಣ್ಣ, ಶ್ರೀನಿವಾಸ, ಕೆ ಪಿ ಎಸ್ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಜಿಲೇಂದ್ರ ರಾಜೇಂದ್ರ, ಶಿಕ್ಷಕಿ ಶೀಲಾಮಣಿ, ಗ್ರಾಮದ ಎಲ್ಲಾ ಕೋಮಿನ ಯಜಮಾನರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.

