Online News in ಕನ್ನಡ

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ

ಗದಗ: ಕಂಟ್ರಾಕ್ಟರಿಂದ ಕಮಿಷನ್‌ ರೂಪದಲ್ಲಿ ಲಂಚ ಪಡೆಯುವಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ಇಂದು ಜರುಗಿದೆ. ಕಾಮಗಾರಿಯೊಂದನ್ನು ಮಂಜೂರು ಮಾಡಲು 11 ಲಕ್ಷ ರೂ. ಕಮಿಷನ್‌ ಹಣದ ಬೇಡಿಕೆ ಇಟ್ಟಿದ್ದ ಡಾ. ಚಂದ್ರು ಲಮಾಣಿ, 5 ಲಕ್ಷ ರೂ.ಗಳನ್ನು ಗುತ್ತಿಗೆದಾರನಿಂದ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ವೈದ್ಯರೂ ಆಗಿರುವ ಡಾ. ಚಂದ್ರು ಲಮಾಣಿ ಅವರು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಶಾಸಕರೊಂದಿಗೆ ಇವರ ಆಪ್ತ ಕಾರ್ಯದರ್ಶಿಗಳಾದ ಮಂಜುನಾಥ್‌ ಮತ್ತು ಗುರು ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಈ ಮೂವರು ಲೋಕಾಯುಕ್ತರ ವಶದಲ್ಲಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ 11 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕ್ಲಾಸ್‌-1 ಗುತ್ತಿಗೆದಾರರಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ಲೋಕಾಯುಕ್ತ ಎಸ್.ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಅಲ್ಲದೆ, ಆಸ್ಪತ್ರೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕರ ಬಾಲಾಜಿ ಆಸ್ಪತ್ರೆಯಲ್ಲಿ 4.50 ಲಕ್ಷ ರೂ. ಹಾಗೂ ಖಾಸಗಿ ಶಾಲೆಯ ಕಂಪೌಂಡ್‌ನಲ್ಲಿ 5 ಲಕ್ಷ ರೂ.ಗಳನ್ನು ಲೋಕಾಯುಕ್ತರ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

 

Call Now Button