ಮೈಸೂರು: ತಮ್ಮ ರಾಜಕೀಯ ಜೀವನದಲ್ಲಿ ದಾಖಲೆಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆ ಮೈಸೂರಿಗೆ ಬಹು ದಿನಗಳ ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ದಾಖಲೆಯ ಕೊಡುಗೆ ನೀಡಬೇಕೆಂದು ಬಿಜೆಪಿ ನಾಯಕ, ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ ಆಗ್ರಹಿಸಿದ್ದಾರೆ.
ಈ ಕುರಿತು, ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಾಖಲೆಯ ಬಜೆಟ್ ಹೆಸರಿಗಷ್ಟೇ ದಾಖಲೆಯಾಗದೆ ಮೈಸೂರು ಜಿಲ್ಲೆಯ ಪಾಲಿಗೂ ದಾಖಲೆ ಪ್ರಮಾಣದ ಅನುದಾನ ನೀಡಲು ವೇದಿಕೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಹಾ ಮೈಸೂರು ನಾಗರೀಕ ವೇದಿಕೆಯ ಮೂಲಕ ಮೈಸೂರು ನಗರದ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಹೋರಾಟ ನಡೆಸುತ್ತಿರುವ ಇವರು, ಈ ಬಾರಿಯ ಬಜೆಟ್ ಮೈಸೂರು ಪರಂಪರೆ, ಸುಸ್ಥಿರ ಅಭಿವೃದ್ಧಿ, ಹಾಗು ಮಹಾ ಮೈಸೂರು ನಿರ್ಮಾಣಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಅನುದಾನವನ್ನು ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಇಷ್ಟು ಹಣಕಾಸು ಬೆಂಬಲ ಸದ್ಯದ ತುರ್ತು :
“ಮೈಸೂರು ಎಂದರೆ ಪರಂಪರೆ ಹಾಗು ಪ್ರವಾಸೋದ್ಯಮ. ಈ ಎರಡು ಕ್ಷೇತ್ರಗಳು ನಗರದ ಅಭಿವೃದ್ಧಿಯ ಕಣ್ಣಿದ್ದಂತೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಗೆ ವಿಶೇಷ ನಿಧಿ- ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಯೋಗ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆಗಳ ಅಭಿವೃದ್ಧಿಗೆ ಇನ್ನು ಅಗತ್ಯವಾದ ಮೂಲ ಸೌಕರ್ಯ ಸಿದ್ಧಗೊಂಡಿಲ್ಲ. ಆರೋಗ್ಯ ವ್ಯವಸ್ಥೆ ಕೂಡಾ ಅತೀವ ಒತ್ತಡದಲ್ಲಿದೆ. ಈ ಹಿನ್ನಲೆಯಲ್ಲಿ ಮೈಸೂರು ಮಹಾನಗರದ ಮುಂದಿನ ಸುಮಾರು ೨೦-೩೦ ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಿ: ಮೈಸೂರು ನಗರದ ಒಳಗೆ ಈಗ ಅನಗತ್ಯವಾಗಿ ಎರಡು ಫ್ಲೈ ಓವರ್ ಪ್ರಸ್ತಾಪಿಸಲಾಗಿದೆ. ಇಂತಹ ಯೋಜನೆಗೆ ಯಾವುದೇ ಅನುದಾನ ನೀಡಬಾರದು. :”ಸಮಸ್ತ ಮೈಸೂರು ನಗರದ ಜನರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಖಮಂತ್ರಿಗಳು ಯೋಜನೆ ರೂಪಿಸಬೇಕಿದೆ,” ಎಂದು ಅವರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ನಗರ ಹಾಗು ಗ್ರಾಮೀಣ ಪ್ರದೇಶಗಳೆರಡನ್ನು ಹೊಂದಿವೆ. ಇಂದಿಗೂ ಇಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಜನ ಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. ಈ ಹಿನ್ನಲೆಯಲ್ಲಿ, ಆಧುನಿಕ ವ್ಯವಸ್ಥೆ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

