ಬೆಂಗಳೂರು: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಇತ್ತೀಚೆಗೆ ನಿಧನರಾದ ಹೆಚ್.ವೈ. ಮೇಟಿ ಅವರ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ನಿಶ್ಚಿತಗೊಂಡಿದೆ. ಈ ಸಂಬಂಧ ಕುಟುಂಬದೊಳಗೆ ಭುಗಿಲೆದಿದ್ದ ಭಿನ್ನಮತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಮನಗೊಳಿಸಿದ್ದಾರೆ.
ಬಾಗಲಕೋಟೆ ವಿಧಾನಸಭಾಗೆ ಉಪ ಚುನಾವಣೆ ಘೋಷಣೆಗೊಂಡ ಬೆನ್ನ ಹಿಂದೆ ಮೇಟಿ ಕುಟುಂಬದಲ್ಲಿಯೇ ಟಿಕೆಟ್ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಮೇಟಿ ಅವರ ಕಿರಿಉಯ ಪುತ್ರಿ ಮಹಾದೇವಿ ಮೇಟಿ, ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ್, ಪುತ್ರಿಯರಾದ ಬಾಯಕ್ಕ ನಡುವೆಯೇ ಟಿಕೆಟ್ ಪೈಪೋಟಿ ಏರ್ಪಟ್ಟಿತ್ತು.
ಇನ್ನು ಮೇಟಿ ಅವರ ಕಿರಿಯ ಪುತ್ರಿ ಮಹಾದೇವಿ ಮೇಟಿ ಒಂದು ಹೆಜ್ಜೆ ಮುಂದೋಗಿ ಮಾರ್ಚ್ ೨೦ರಂದು ನಾಮಪತ್ರ ಸಲ್ಲಿಸುವುದಾಗಿಯೂ ಘೋಷಿಸಿದ್ದರು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎಲ್ಲ ನಾಲ್ವರು ಆಕಾಂಕ್ಷಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಸಂಧಾನ ನಡೆಸಿದ್ದಾರೆ.
ಉಪ ಚುನಾವಣೆಯಲ್ಲಿ ನಿಮ್ಮ ನಾಲ್ವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗಲಿದೆ. ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಎಲ್ಲರೂ ದುಡಿಯಬೇಕು. ಅಪಸ್ವರ ಇರಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆಮೂಲಕ ಮೇಟಿ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ.


