ಮೈಸೂರು: ನಂಜನಗೂಡಿನಲ್ಲಿ ೪೬ ಮರಗಳು ಸೇರಿದಂತೆ ಮೈಸೂರು ನಗರ ಮತ್ತು ಸುತ್ತ ಮುತ್ತ ಇತ್ತೀಚಿನ ದಿನಗಳಲ್ಲಿ ಮರಗಳ ಹನನ ಅವ್ಯಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅರಣ್ಯಭವನದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪರಿಸರ ವಾದಿಗಳು, ಪ್ರಜ್ಞಾವಂತ ನಾಗರೀಕರು ಭಾಗವಹಿಸಿ ಮರಗಳನ್ನು ಕಡಿಯುತ್ತಿರುವ ಕೊಲೆಗಡುಕರಿಗೆ ಕೇವಲ ದಂಡ ವಿಧಿಸದೆ ಜೈಲಿಗಟ್ಟುವ ಕಾನೂನು ಬರಬೇಕೆಂದು ಆಗ್ರಹಿಸಿದರು.
ನಂಜನಗೂಡಿನ ಹೆಜ್ಜಿಗೆ ಗ್ರಾಮದ ಕಬಿನಿಯ ದಡದಲ್ಲಿ ಸುಮಾರು ೪೬ ಮರಗಳನ್ನು ಹನನ ಮಾಡಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿದು ಸಾಗಿಸಿದ್ದರೂ ಅರಣ್ಯ ಇಲಾಖೆಗಾಗಲಿ, ಕಾವೇರಿ ನೀರಾವರಿ ನಿಗಮಕ್ಕಾಗಲಿ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ಗೊತ್ತಿಲ್ಲವೆಂದರೆ ನಂಬಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಇದೇ ರೀತಿ ಮೈಸೂರು ನಗರದಲ್ಲೂ ಒಂದೆಡೆ ಅಭಿವೃದ್ಧಿ ಹೆಸರಿನಲ್ಲಿ ಮತ್ತೊಂದೆಡೆ ಅನುಮನಾಸ್ಪದವಾಗಿ ಮರಗಳನ್ನು ಕಡಿಯುತ್ತಿದ್ದು, ಪರಿಸರದ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮರಗಳನ್ನು ಉಳಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪರಿಸರಕ್ಕಾಗಿ ನಾವು ಎ.ಟಿ. ರಾಮಸ್ವಾಮಿ, ಬಾನು ಮೋಹನ್, ಪರಶುರಾಮೇಗೌಡ, ಅಂಜನೇಯ ರೆಡ್ಡಿ ನೀರಾವರಿ, ಭಾಗ್ಯ ಶಂಕರ್, ಅಂಜನಾ, ಪ್ರಭಾ ನಂದೀಶ್, ಗಾಯತ್ರಿ. ಎಸ್. ಮಧು ಶ್ರೀ , ಕುಸುಮ ಆಯರಹಳ್ಳಿ, ಶೈಲಜೇಶ್, ಬಾನು ಪ್ರಶಂತ್ ಮೊದಲಾದವರು ಭಾಗವಹಿಸಿದ್ದರು.


