Online News in ಕನ್ನಡ

ಚಾಮರಾಜನಗರದ: ಅಕಾಲಿಕ ಮಳೆಗೆ ಬೆಳೆ ಹಾನಿ, ರೈತರಿಂದ ಪರಿಹಾರ ಕೋರಿ ಪ್ರತಿಭಟನೆ

ಚಾಮರಾಜನಗರ: ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮನವಿ ಪತ್ರ ನೀಡಲು ತೆರಳುತ್ತಿದ್ದ ರೈತರನ್ನು ತಡೆದ ಪೊಲೀಸರನ್ನು  ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ತರಾಟೆಗೆ ತೆಗೆದುಕೊಂಡ ಘಟನೆಯೂ ಜರುಗಿದೆ.

ಚಾಮರಾಜನಗರದ ರಾಮರಾಜೇಶ್ವರಿ ದ್ಯಾನವನದಿಂದ ಮೆರವಣಿಗೆಯಲ್ಲಿ ಬಂದ ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ಉದ್ದಕ್ಕೂ  ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ಮಾರ್ಚ್‌ ೧೭ ಮತ್ತು ೧೮ರಂದು ರಾಜ್ಯದಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಯಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಅದರಲ್ಲೂ ತೋಟಗಾರಿಕೆ ಬೆಳೆಗಳಾದ ಬಾಳೆ, ಈರುಳ್ಳಿ, ಕಲ್ಲಂಗಡಿ, ಪಪ್ಪಾಯ, ಅರಿಶಿಣ, ಮೆಣಸಿನಕಾಯಿ, ಸೌತೆಕಾಯಿ ಹಾಗೂ ದ್ರಾಕ್ಷಿ ಮೊದಲಾದ ಬೆಳೆಗಳು ಹಾನಿಯಾಗಿದೆ. ಆದ್ದರಿಂದ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವೈಜ್ಞಾನಿಕ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಈನಡುವೆ, ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲು ಮುಂದಾದ ರೈತರನ್ನು ತಡೆದ ಪೊಲೀಸರಿಗೆ ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ʻನಾನು  ಮದ್ದು, ಬಾಂಬು ತಂದಿಲ್ಲ. ಕೈಯಲ್ಲಿ ಬಾರುಗೋಲು ಸಹ ಇಲ್ಲ. ನಮ್ಮ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿ ವರ್ಷ ಅವರ ಸಂಬಳವನ್ನು ಹೆಚ್ಚು ಮಾಡಿಕೊಳ್ಳುತ್ತಾರೆ. ನಮ್ಮಿಂದ ಓಟು ಹಾಕಿಸಿಕೊಂಡ ಜನಪತ್ರಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಒಂದು ವೇಳೆ ಪೊಲೀಸರಿಗೆ ಸಂಬಳ ನಿಲ್ಲಿಸಿದರೆ ನೀವು ಏನು ಮಾಡ್ತೀರಾ ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಹಾಲಿನ ನಾಗರಾಜು, ಅಡ್ಡುವಿನಹಳ್ಳಿ ರಾಜು, ಒಳಗೆರೆ ಗಣೇಶ್‌, ಮಲಿಯೂರು ಮಹೇಂದ್ರ, ಸತೀಶ್‌ , ನಾನು, ಪ್ರಕಾಶ್‌ ಗಾಂಧಿ, ಚಿದಂಬರ್‌, ಊರದಹಳ್ಳೀ ರಾಮಣ್ಣ, ಬಸವರಾಜು, ಮುಕಡಹಳ್ಳಿ ರಾಜು ಪುಟ್ಟ ಮಲ್ಲೇಗೌಡ ಭಾಗವಹಿಸಿದ್ದರು.

 

Call Now Button