Online News in ಕನ್ನಡ

ಬಜೆಟ್‌ ಅಧಿವೇಶನ ಮಾರ್ಚ್‌ ೨೬ಕ್ಕೆ ಮುಕ್ತಾಯ: ಸ್ಪೀಕರ್‌ ಯು.ಟಿ.ಖಾದರ್‌ ಪ್ರಕಟ

ಬೆಂಗಳೂರು: ಬಜೆಟ್ ಅಧಿವೇಶನವನ್ನು ಮಾರ್ಚ್ 26ಕ್ಕೆ ಮುಕ್ತಾಯಗೊಳಿಸುವುದಾಗಿ ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಪ್ರಕಟಿಸಿದರು.
ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾದ ಅಂಶಗಳ ಬಗ್ಗೆ ಸ್ಪೀಕರ್ ಸದನದಲ್ಲಿ ಮಾಹಿತಿ ನೀಡಿದರು.‌ ಬಜೆಟ್ ಮೇಲಿನ‌ ಚರ್ಚೆ ಇಂದು ಕೊನೆಗೊಳ್ಳಲಿದೆ.‌ ನಾಳೆ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಮಾ.26ರಂದು ಅಧಿವೇಶನ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಆ ಮೂಲಕ ಅಧಿವೇಶನವನ್ನು ಒಂದು ದಿನಕ್ಕೆ ಮೊಟಕು ಮಾಡಲು ತೀರ್ಮಾನಿಸಲಾಗಿದೆ. ಮಾ.27ರ ವರೆಗೆ ಅಧಿವೇಶನ‌ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ಮಾ.26ಕ್ಕೆ ಅಧಿವೇಶನ ಮುಕ್ತಾಯಗೊಳಿಸಲಾಗುತ್ತಿದೆ. ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಪ್ರಚಾರಕ್ಕೆ ತೆರಳುತ್ತಿರುವ ಕಾರಣ ಅಧಿವೇಶನ ಮೊಟಕುಗೊಳಿಸಲಾಗುತ್ತಿದೆ.
ಈ ಬಗ್ಗೆ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಮೊಟಕು ಸಂಬಂಧ ಚರ್ಚೆ ನಡೆಸಲಾಯಿತು. ಅಧಿವೇಶನವನ್ನು ಒಂದು ದಿನ ಮುಂಚೆಯೇ ಮುಕ್ತಾಯಗೊಳಿಸುವ ಬಗ್ಗೆ ಸಭೆಯಲ್ಲಿ ಸರ್ವಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.‌ ಆ ಮೂಲಕ 13 ದಿನಗಳ ಕಾಲವಷ್ಟೇ ಸದನ ನಡೆಸಲು ಉದ್ದೇಶಿಸಿದ್ದ ಅಧಿವೇಶನವನ್ನು 12 ದಿನಕ್ಕೆ ಸೀಮಿತ ಮಾಡಿ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

Call Now Button