Online News in ಕನ್ನಡ

ಪೆಟ್ರೋಲ್‌ ಡೀಸೆಲ್‌ ಕೊರತೆ ಆಗಲ್ಲ, ಅಕ್ರಮ ಸಂಗ್ರಹಣ ಬೇಡ: ಎಫ್‌ಎಂಪಿಟಿ ಸ್ಪಷ್ಟನೆ

ಮೈಸೂರು: ಇರಾನ್‌- ಇಸ್ರೇಲ್‌ – ಅಮೇರಿಕಾ ಯುದ್ಧದಿಂದಾಗಿ ಪೆಟ್ರೋಲ್‌ ಮತ್ತು ಡಿಸೆಲ್‌ ಅಭಾವ ಉಂಟಾಗಲಿದೆ ಎಂದು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಶುದ್ಧ ಸುಳ್ಳು. ಗ್ರಾಮಕರಿಗೆ ಬೇಕಾಗುವಷ್ಟು ಇಂಧನ ನಮ್ಮಲ್ಲಿ ಲಭ್ಯವಿದೆ ಎಂದು ಮೈಸೂರು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷೆ ಶಶಿಕಲ ನಾಗರಾಜ್‌ ತಿಳಿಸಿದ್ದಾರೆ.
ಈ ಸಂಬಂಧ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್‌ಪಿ, ಇಂಡಿಯನ್‌ ಆಯಿಲ್‌ ಮತ್ತು ಭಾರತ್‌ ಪೆಟ್ರೋಲಿಯಂ ಒಳಗೊಂಡಂತೆ ನಮ್ಮ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳು ಸಮರ್ಪಕವಾಗಿ ಲಭ್ಯವಿದೆ ಎಂದು ಸ್ಪಷ್ಟಪಡಿಸಿದರು.
ಭಾರತ ಸರಕಾರ, ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯ ಹಾಗೂ ಎಲ್ಲ ಆಯಿಲ್‌ ಮಾರ್ಕೆಟಿಂಗ್‌ ಕಂಪನಿಗಳಿಂದ ಸಂಪೂರ್ಣ ಸಹಕಾರ ಮತ್ತು ನಿರಂತರ ಪೂರೈಕೆ ದೊರೆಯುತ್ತಿದೆ. ಇದರಿಂದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಸರಾಗವಾಗಿ ಇಂಧನ ಲಭ್ಯವಿದೆ. ಈ ಹಿನ್ನಲ್ಲೆಯಲ್ಲಿ ಗ್ರಾಮಹಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವುದು ಬೇಡ ಎಂದರು.
ಅಲ್ಲದೆ, ಅಭಾವ ಸೃಷ್ಟಿಯಾಗಲಿದೆ ಎಂಬ ಕಾರಣಕ್ಕೆ ಇಂಧನವನ್ನು ಅನಾವಶ್ಯಕವಾಗಿ ಸಂಗ್ರಹಿಸಿಕೊಳ್ಳುವುದು ಕಾನೂನು ಬಾಹೀರ. ಅಸುರಕ್ಷಿತ ಪಾತ್ರೆಗಳಲ್ಲಿ ಇಂಧನವನ್ನು ಸಂಗ್ರಹಿಸುವುದು ದೊಡ್ಡ ಅಗ್ನಿ ದುರಂತಕ್ಕೂ ಕಾರಣವಾಗಬಹುದು. ಆದ್ದರಿಂದ ಜನರು ಹೆಚ್ಚುವರಿ ಪೆಟ್ರೋಲ್‌ ಡಿಸೆಲ್‌ಗಳನ್ನು ಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಪೆಟ್ರೋಲಿಯಂ ವರ್ತಕರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ, ಎಂ.ಎಸ್.‌ ಲೋಕೇಶ್‌, ರಂಜಿತ್‌ ಹೆಗ್ಡೆ, ಭಗವಾನ್, ಮನೋಜ್‌ ಕುಮಾರ್‌ ಮೊದಲಾದವರು ಹಾಜರಿದ್ದರು.

Call Now Button