ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇವರಿಗೆ 86 ವರ್ಷ ವಯಸ್ಸಾಗಿತ್ತು.
ಹಸಿವು, ಬಡತನದಲ್ಲಿ ಬೆಂದ ಕುಟುಂಬವನ್ನು ತನ್ನ ಒಡಲಿನಲ್ಲಿಟ್ಟು ಮಕ್ಕಳನ್ನು ಲಾಲಿಸಿ, ಪಾಲಿಸಿ, ಪೋಷಿಸಿದ ತಾಯಿ ಸ್ವರ್ಣಲತಾ ಅವರ ಅಗಲಿಕೆ ಪ್ರಕಾಶ್ ರಾಜ್ ಮತ್ತು ಕುಟುಂಬದ ಸದಸ್ಯರನ್ನು ದುಃಖದಲ್ಲಿ ಮುಳುಗಿಸಿದೆ.

ʻನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು, ಬೆಳಗಾವಿಯ ಅನಾಥಾಶ್ರಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದವರು. ನಮ್ಮ ಅಪ್ಪ ಮಂಗಳೂರಿನವರು. ಬೆಂಗಳೂರಿಗೆ ಬಂದು ಇಬ್ಬರೂ ಮದುವೆಯಾದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೆ ಇದೆ
– ಸಂದರ್ಶನವೊಂದಲ್ಲಿ ತಂದೆ-ತಾಯಿಯ ಬಗ್ಗೆ ಪ್ರಕಾಶ್ ರಾಜ್ ಅವರ ಮನದ ಮಾತು.

ಪ್ರಕಾಶ್ ರಾಜ್ ಅವರ ವೈಯಕ್ತಿಕ ಬದುಕಿನ ಏರಿಳಿತಗಳ ಬಗ್ಗೆ ಮತ್ತು ತಾಯಿ ತೋರಿದ ಧೈರ್ಯದ ಬಗ್ಗೆ ಅನೇಕ ವೇದಿಕೆಯಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತಾಯಿ ಸುವರ್ಣಲತಾ ನಿಧನಕ್ಕೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್ ಕಲ್ಯಾಣ್ ಸೇರಿದಂತೆ ಅನೇಕ ಗಣ್ಯರು, ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ.


