Online News in ಕನ್ನಡ

ಬಾಗಲಕೋಟೆಯಲ್ಲಿ ಸಿಎಂ ಮತ ಬೇಟೆ: ಬಿಜೆಪಿ ವಿರುದ್ಧ ಮಾಡಿದ ಆಪಾದನೆಗಳೇನು ?

ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಆಪ್ತಮಿತ್ರ ಹೆಚ್.ವೈ. ಮೇಟಿ ಅವರ ಪುತ್ರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಪರ ಐದು ದಿನಗಳ ಕ್ಷೇತ್ರ ವ್ಯಾಪ್ತಿ ಮತಬೇಟೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪ್ರಚಾರದ ಉದ್ದಕ್ಕೂ ಬಿಜೆಪಿಯನ್ನು ಟಾರ್ಗೆಟ್‌ ಮಾಡಿದ್ದಾರೆ.
ಪಂಚ ಗ್ಯಾರಂಟಿಗಳನ್ನು ವಿರೋಧಿಸಿದವರು, ಅಧಿಕಾರದಲ್ಲಿದ್ದಾಗ ಕಳ್ಳೆತ್ತುಗಳಾಗಿದ್ದವರು, ಸುಳ್ಳು ಮತ್ತು ಅಪಪ್ರಚಾರ ಮಾಡುವ ಬಿಜೆಪಿಗೆ ಮತ ನೀಡಬೇಡಿ. ಪಂಚ ಗ್ಯಾರಂಟಿಗಳ ಮೂಲಕ ನಡೆದಂತೆ ನುಡಿದಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಸಿಎಂ ಮನವಿ ಮಾಡಿದ್ದಾರೆ.


ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಂಪುರ, ಸುತಗುಂಡಾರ, ನಾಯನೇಗಲಿ ಸೇರಿ ಸುತ್ತ ಮುತ್ತಲ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕಳ್ಳೆತ್ತುಗಳಾಗಿ, ವಿಪಕ್ಷದಲ್ಲಿದ್ದಾಗ ಅಪಪ್ರಚಾರ ಮಾಡಿಕೊಂಡು ತಿರುಗುವ ಬಿಜೆಪಿಯನ್ನು ನಂಬಬೇಡಿ ಎಂದು ತಿಳಿಸಿದರು.
ಬಿಜೆಪಿ ಅವರು ಮೇಲ್ವರ್ಗದ ಜನರ ಆರ್ಥಿಕ ಬಲವರ್ಧನೆಗೆ ಆಧ್ಯತೆ ನೀಡಿದರೆ, ನಾನು ಬಡವರು, ಮಧ್ಯಮ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಲು ಗ್ಯಾರಂಟಿ ಯೋಜನೆ ಜಾರಿಗೆ ಮಾಡಿದ್ದೇವೆ. ಈ ಪಂಚ ಗ್ಯಾರಂಟಿಗಳಿಂದಾಗಿ ಈವರಗೆ ರಾಜ್ಯ ಸರಕಾರ 1.40 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗ ಮಾಡಿದೆ. ಇದರಿಂದ ಮಹಿಳೆಯರಿಗೆ ಶಕ್ತಿ ಬಂದಿದೆ ಎಂದರು.


ಬಾಗಲಕೋಟೆಯ ಹಲವು ಗ್ರಾಮಗಳಿಗೆ ನೀರು ಒದಗಿಸುವ ದೃಷ್ಟಿಯಿಂದ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಲು ಸರಕಾರ ಬದ್ಧವಿದೆ. ಆದರೆ, ಕೇಂದ್ರ ಸರಕಾರಿ ಈ ಬಗ್ಗೆ ಅಧಿಸೂಚನೆ ಹೊರಡಿಸದೆ ಕಳೆದ 14 ವರ್ಷಗಳಿಂದ ಕಾಲಹರಣ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಆಲಮಟ್ಟಿ ಅಣೆಕಟ್ಟೆ ಯೋಜನೆ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲಿಲ್ಲ. ಇಂತವರಿಗೆ ಮತ ಕೇಳುವ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು.
ಸಚಿವರಾದ ಆರ್.ಬಿ. ತಿಮ್ಮಾಪುರ, ಬೈರತಿ ಸುರೇಶ್, ಶಿವಾನಂದ ಪಾಟೀಲ್ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಗೂ ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.


ಬಿಜೆಪಿಯವರು ನುಡಿದಂತೆ ನಡೆಯಲಿಲ್ಲ. ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ. ಕೋವಿಡ್ ನಿಂದ ಬಳಲಿದ್ದ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಲು ಐದು ಗ್ಯಾರಂಟಿಗಳನ್ನು ತಂದು ಜನರಿಗೆ ನೆರವಾಗಿದ್ದು ನಮ್ಮ ಸರ್ಕಾರ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಕಬ್ಬು ಬಳೆಗೆ ರೈತರ ಬೇಡಿಕೆಯಷ್ಟು ಬೆಂಬಲ ಬೆಲೆ ನೀಡದಿದ್ದಾಗ ನಾನು ರೈತ ಸಂಘಟನೆಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ 200 ರೂ ಹೆಚ್ಚು ಮಾಡಿದೆವು. ಎಚ್.ವೈ.ಮೇಟಿಯವರು ಜನರ ಕೈಗೆ ಸಿಗುತ್ತಿದ್ದರು. ಅಹಿಂದ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಾವು ಪ್ರತೀ ವರ್ಷ 52 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಜೇಬಿಗೆ ಹಾಕುತ್ತಲೇ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇವೆ. ಎಚ್.ವೈ.ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲೇಬೇಕು ಎಂದು ಕರೆ ನೀಡಿದರು. ಸಚಿವರಾದ ಆರ್.ಬಿ. ತಿಮ್ಮಾಪುರ, ಬೈರತಿ ಸುರೇಶ್, ಶಿವಾನಂದ ಪಾಟೀಲ್ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಭಾಗವಹಿಸಿದ್ದರು.

Call Now Button