ಬಾಗಲಕೋಟೆ: ಭಾರತದಂತಃ ಜಾತಿ ಪೀಡಿತ ದೇಶದಲ್ಲಿ ಜೀತ ಪದ್ದತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿರ್ಮೂಲನೆ ಮಾಡಲು ಕಾನೂನು ಮತ್ತು ಕಾಯ್ದೆ ಇದ್ದರೂ ಇಂದಿಗೂ ಈ ಅನಿಷ್ಠ ಪದ್ಧತಿ ಜೀವಂತವಾಗಿದೆ. ಇದಕ್ಕೆ ಸಾಕ್ಷಿ ಬಾಲಗಲಕೋಟೆ ತಾಲೂಕಿನ ಸಂಕ್ಲಾಪುರ ಗ್ರಾಮ ವ್ಯಾಪ್ತಿಯ ಇಟ್ಟಿಗೆ ಭಟ್ಟಿಯಲ್ಲಿ ಸುಮಾರು 34 ಮಂದಿ ಕಾರ್ಮಿಕರನ್ನು ಜೀತಕ್ಕೆ ಇರಿಸಿಕೊಂಡು ದುಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಸ್ವಯಂ ಸೇವಾ ಸಂಘಟನೆಗಳಿಂದ ದೂರಿನನ್ವಯ ಇಂದು ದಾಳಿ ನಡೆಸಿರುವ ತಹಶೀಲ್ದಾರ್ ಅಮರೇಶ್ ಪಮ್ಮಾರ್ ನೇತೃತ್ವದ ತಂಡ ಐವರು ಬಾಲ ಕಾರ್ಮಿಕರೂ ಸೇರಿದಂತೆ 34 ಮಂದಿಯನ್ನು ಜೀವದಿಂದ ವಿಮುಕ್ತಿಗೊಳಿಸಿದರು. ವಿಚಿತ್ರವೆಂದರೆ ಶಾಲೆ ತೊರೆದ 9 ಮಕ್ಕಳನ್ನೂ ಸಹ ಜೀತಕ್ಕೆ ಇರಿಸಿಕೊಂಡಿದ್ದು ಕಾರ್ಯಾಚರಣೆಯ ವೇಳೆ ತಿಳಿದುಬಂದಿದೆ.
ಒಡಿಶಾದಿಂದ ಬಂದಿದ್ದ ಈ ಮಂದಿಯನ್ನು ಹೊರ ಪ್ರಪಂಚಕ್ಕೆ ಬಿಡದೆ ಜೀತಕ್ಕೆ ಇರಿಸಿಕೊಳ್ಳಲಾಗಿತ್ತು. ಈ ವಿಷಯ ತಿಳಿದ ಸ್ವಯಂ ಸೇವಾ ಸಂಘಟನೆಯೊಂದು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಇದೀಗ ರಕ್ಷಿಸಲ್ಪಟ್ಟ ಜೀವ ವಿಮುಕ್ತರನ್ನು ಬಾಗಲಕೋಟೆಗೆ ಕರೆದೊಯ್ದು, ಕಾನೂನು ರೀತ್ಯಾ ಕ್ರಮಕೈಗೊಂಡು, ಅವರನ್ನು ಸ್ವಂತ ಊರಿಗೆ ಕಳುಹಿಸಲಾಗಿದೆ.
ಗ್ರಾಮೀಣ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಸತ್ತಿಗೌಡ, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಮುತ್ತಣ್ಣ, ಕಾರ್ಮಿಕ ಕಲ್ಯಾಣ ಅಧಿಕಾರಿ ರಾಕೇಶ್ ಶಿರಕನಹಳ್ಳಿ, ಕಂದಾಯ ನಿರೀಕ್ಷಕ ಬೋರಗಿ ಮತ್ತು ಇತರ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ರಕ್ಷಣೆಯ ನಂತರ, ಇಟ್ಟಿಗೆ ಭಟ್ಟಿ ಮಾಲೀಕರಿಗೆ ಎಚ್ಚರಿಕೆಯ ಜೊತೆಗೆ ಮಾಲೀಕರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರ ಶೋಷಣೆ ಮತ್ತು ಮಕ್ಕಳ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ.

