Online News in ಕನ್ನಡ

ಇದಪ್ಪ ಸಾಧನೆ ನಾಗಪ್ಪ ! ದ್ವಿತೀಯ ಪಿಯು ವಿಜ್ಞಾನದಲ್ಲಿ ೫೮೦ ಅಂಕ ಪಡೆದ ಗ್ರಾಮೀಣ ಪ್ರತಿಭೆ

ʻಗಂಡನಿಲ್ಲದ ತಾಯಿಗೆ ಆಸರೆಯಾಗಿ, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡಿ

ಕುಟುಂಬದ ಜವಾಬ್ದಾರಿ ಹೊತ್ತು, ದ್ವಿತೀಯ ಪಿಯು

ವಿಜ್ಞಾನ ಪರೀಕ್ಷೆಯಲ್ಲಿ ೬೦೦ಕ್ಕೆ ೫೮೦ ಅಂಕ ಪಡೆದ ಗ್ರಾಮೀಣ ಪ್ರತಿಭೆʼ

ವಿಶೇಷ ವರದಿ: ರೇವಣ್ಣ ತುಂಬಲ

ಟಿ.ನರಸೀಪುರ: ಸತತ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಕಷ್ಟದ ಸಂದರ್ಭದಲ್ಲೂ ಸಾಧನೆ ಮಾಡಬಹುದು ಎಂಬುದನ್ನು ತಾಲ್ಲೂಕಿನ ಎಡದೊರೆ ಗ್ರಾಮದ ಯುವಕ ನಾಗಪ್ಪ ವೈ.ಎಸ್ ಸಾಬೀತುಪಡಿಸಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 600ಕ್ಕೆ 580 ಅಂಕಗಳನ್ನು ಪಡೆಯುವ ಮೂಲಕ ಇವರು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತಂದೆಯಿಲ್ಲದ ನೋವಲ್ಲೂ ತಾಯಿಗೆ ಆಸರೆ :
ನಾಗಪ್ಪ ಅವರ ತಂದೆ ದಿವಂಗತ ಶಿವಣ್ಣ ವೈ. ಎಸ್ ಅವರು ಗ್ರಾಮದಲ್ಲಿ ಸಣ್ಣದೊಂದು ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿ ನಾಗಪ್ಪನ ಹೆಗಲ ಮೇಲೆ ಬಿತ್ತು. ಆದರೆ ಈ ಸಂಕಷ್ಟಕ್ಕೆ ಎದೆಗುಂದದ ನಾಗಪ್ಪ, ತಂದೆಯ ಸ್ಥಾನದಲ್ಲಿ ನಿಂತು ತಾಯಿ ಸುಂದರಮ್ಮ ಅವರಿಗೆ ಆಸರೆಯಾಗಿ ನಿಂತಿದ್ದಾರೆ.

ವಿಜ್ಞಾನ ವಿಷಯ: 580/600 (96.6%)
ಗಣಿತ – 99
ಕಂಪ್ಯೂಟರ್ ಸೈನ್ಸ್ – 99,
ಕನ್ನಡ – 98,
ಭೌತಶಾಸ್ತ್ರ – 96,
ಇಂಗ್ಲಿಷ್ – 95,
ರಸಾಯನಶಾಸ್ತ್ರ – 93.

ಸೂರ್ಯೋದಯಕ್ಕೂ ಮುನ್ನವೇ ಕೆಲಸ ಶುರು :
ನಾಗಪ್ಪನ ದಿನಚರಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಭಿನ್ನ ಬೆಳಗಿನ ಜಾವ 5 ಗಂಟೆಗೆ ಎದ್ದು ಟಿ.ನರಸೀಪುರ ಪಟ್ಟಣಕ್ಕೆ ಹೋಗಿ ಹಾಲು ಮತ್ತು ಮೊಸರನ್ನು ತಂದು ಬೆಳಿಗ್ಗೆ 9 ಗಂಟೆಯವರೆಗೆ ಮನೆಯ ಮುಂದಿನ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡಿ, ನಂತರ ತಯಾರಾಗಿ ಕಾಲೇಜಿಗೆ ತೆರಳುತ್ತಿದ್ದರು.
ಸಂಜೆ 5 ಗಂಟೆಯ ನಂತರ ಕಾಲೇಜಿನಿಂದ ಬಂದ ತಕ್ಷಣ ವಿಶ್ರಮಿಸದೆ, ಮತ್ತೆ ಸೈಕಲ್ ಅಥವಾ ಬಸ್ ಹಿಡಿದು ನರಸೀಪುರಕ್ಕೆ ತೆರಳಿ ಅಂಗಡಿಗೆ ಬೇಕಾದ ದಿನಸಿ ಸಾಮಾನುಗಳನ್ನು ತಂದು ರಾತ್ರಿವರೆಗೂ ಅಂಗಡಿಯಲ್ಲಿ ವ್ಯಾಪಾರ ಮಾಡಿ, ಮನೆಗೆ ಬರುವ ಗ್ರಾಹಕರನ್ನು ಉಪಚರಿಸಿ, ಎಲ್ಲ ಕೆಲಸ ಮುಗಿದ ಮೇಲೆ ರಾತ್ರಿ ಸಮಯದಲ್ಲಿ ಏಕಾಗ್ರತೆಯಿಂದ ಓದಿಗೆ ಕುಳಿತುಕೊಳ್ಳುತ್ತಿದ್ದರು.
ನಾಗಪ್ಪನ ಈ ಸಾಧನೆಯ ಹಿಂದೆ ತಾಯಿಯ ಪ್ರೋತ್ಸಾಹ ಹಾಗೂ ಕಾಲೇಜು ಶಿಕ್ಷಕರ ಮಾರ್ಗದರ್ಶನ ಅಪಾರವಾಗಿದೆ. “ಮಗ ಕಷ್ಟಪಟ್ಟು ಕೆಲಸ ಮಾಡುತ್ತಲೇ ಓದಿ ಇಷ್ಟೊಂದು ಅಂಕ ಗಳಿಸಿರುವುದು ನನಗೆ ಹೆಮ್ಮೆ ತಂದಿದೆ” ಎಂದು ತಾಯಿ ಸುಂದರಮ್ಮ ಕಣ್ಣಾಲಿ ತುಂಬಿ ಹೇಳುತ್ತಾರೆ.
ಗ್ರಾಮೀಣ ಭಾಗದ ಒಬ್ಬ ಸಾಮಾನ್ಯ ಯುವಕ, ಕಿರಾಣಿ ಅಂಗಡಿಯ ಕೆಲಸದ ಒತ್ತಡದ ನಡುವೆಯೂ ‘ಡಿಸ್ಟಿಂಕ್ಷನ್’ ಪಡೆದಿರುವುದು ಎಡದೊರೆ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

 

Call Now Button