Online News in ಕನ್ನಡ

ಮೈಸೂರಲ್ಲಿ ಮಹಾನಾಯಕ ಡಾ. ಅಂಬೇಡ್ಕರ್‌ ಅವರ 135ನೇ ಜಯಂತಿ ಅದ್ಧೂರಿ ಆಚರಣೆ

ಮೈಸೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಕಾಲಘಟ್ಟದ ಅಗತ್ಯವಾಗಿದೆ ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಅವರ ಸಂಘಗಳ ಒಕ್ಕೂಟದ ವತಿಯಿಂದ ಕಲಾಮಂದಿರದದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ” ಎಂಬ ಅಂಬೇಡ್ಕರ್ ಅವರ ನುಡಿಯಂತೆ, ಇಂದಿನ ಯುವ ಪೀಳಿಗೆಗೆ ಮಹಾನ್ ವ್ಯಕ್ತಿಗಳ ಇತಿಹಾಸ, ಹೋರಾಟ, ತ್ಯಾಗ, ಚಿಂತನೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು.
ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೆ, ತಮ್ಮ ಅಗಾಧ ಪಾಂಡಿತ್ಯ ಮತ್ತು ವಿದ್ವತ್ತಿನಿಂದ ಸಂವಿಧಾನ ರಚನೆಯ ಜವಾಬ್ದಾರಿಯನ್ನು ಪಡೆದರು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ಶಿಕ್ಷಣ ಮತ್ತು ಜ್ಞಾನದಿಂದ ಜೀವನ ಹಾಗೂ ಸಮಾಜ ಎರಡನ್ನು ಉತ್ತಮವಾಗಿ ರೂಪಿಸಬಹುದು ಎಂದರು.
ಶೋಷಣೆಯ ವಿರುದ್ಧ ದನಿ ಎತ್ತಲು ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಬೇಕುಎಂಬ ಅಂಬೇಡ್ಕರ್ ಅವರ ಸಿದ್ಧಾಂತಗಳು ಇಂದಿಗೂ ಪ್ರಸ್ತುತ. ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯ ಎಂದು ಅವರು ತಿಳಿಸಿದರು.
ಡಾ: ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಅವರ ಭಾಷಣಗಳ ಪುನರುಚ್ಚಾರಣೆ ಮತ್ತು ‘ಭೀಮ ಗೀತೆ’ ಹಾಡುವ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಎಂದರು.
ಚಾಮರಾಜ ಕ್ಷೇತ್ರದ ಶಾಸಕರು ಕೆ. ಹರೀಶ್ ಗೌಡ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಮತ್ತು ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನಾವು ಇಂದಿಗೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.
ಮೈಸೂರಿನಲ್ಲಿ ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅತ್ಯಂತ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಡಾ: ಬಿ.ಆರ್ ಅಂಬೇಡ್ಕರ್ ಅವರ ಸಾಧನೆಯ ಬಗ್ಗೆ ಮಾತನಾಡಲು ಒಂದು ವರ್ಷವಾದರೂ ಮುಗಿಯದಷ್ಟು ವಿಚಾರಗಳು ಅವರ ಬದುಕಿನಲ್ಲಿವೆ. ಆದರೆ, ಅವರ ಮೂಲ ಆಶಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಶಿಕ್ಷಣ ತಲುಪಿಸುವಲ್ಲಿ ಸರ್ಕಾರಗಳು ಮತ್ತು ವ್ಯವಸ್ಥೆ ಇನ್ನೂ ಶ್ರಮಿಸಬೇಕಿದೆ,” ಎಂದು ತಿಳಿಸಿದರು.
ಮೀಸಲಾತಿಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಮತ್ತು ಮೀಸಲಾತಿ ಸೌಲಭ್ಯಗಳು ಇಡೀ ಮಾನವ ಕುಲದ ಸಮಾನತೆಗಾಗಿ . ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯೂ ಸಮಾನತೆಯಿಂದ ಬದುಕಲು ದಾರಿದೀಪವಾಗಿದೆ. ವಿಶ್ವದ ಇತರ ದೇಶಗಳು ಸಹ ನಮ್ಮ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ವಿಶೇಷವಾಗಿ ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳು ಡಾ: ಬಿ.ಆರ್. ಅಂಬೇಡ್ಕರ್ ಅವರು ಮಾಡಿದ ಭಾಷಣದ ತುಣುಕುಗಳನ್ನು ಇಂದು ಪ್ರದರ್ಶಿಸಿದ್ದಾರೆ. ಈ ಭಾಷಣಗಳು ಅಂದಿನ ಕಾಲದ ಕಷ್ಟದ ಪರಿಸ್ಥಿತಿಗಳನ್ನು ತಿಳಿಸುತ್ತದೆ. ಅಂದು ಇದ್ದ ಅಸ್ಪೃಶ್ಯತೆ ಇಂದು ಕಡಿಮೆಯಾಗಿದೆ., ಆದರೆ ಶೋಷಣೆ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇದನ್ನು ಹೋಗಲಾಡಿಸಲು ಅಂಬೇಡ್ಕರ್ ತತ್ವಗಳೇ ದಾರಿ ದೀಪ‌ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಡಿದ ಮಹಾನ್ ಚೇತನ.ಅವರ ಹೋರಾಟದ ಫಲವಾಗಿ ಇಂದು ಶೋಷಿತ ವರ್ಗಗಳಿಗೆ ಘನತೆಯ ಬದುಕು ಸಿಕ್ಕಿದೆ ಎಂದು ಹೇಳಿದರು.
ಸಂವಿಧಾನವೇ ಪ್ರತಿಯೊಬ್ಬರ ಜೀವನದ ಶಕ್ತಿ ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳನ್ನು ನೀಡಿದೆ. ರಾಷ್ಟ್ರಪತಿಗಳಿಂದ ಹಿಡಿದು ಸಾಮಾನ್ಯ ನಾಗರಿಕನವರೆಗೂ ಮತದಾನದ ಮೂಲಕ ಸಮಾನ ಶಕ್ತಿಯನ್ನು ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಜಾತಿ ವ್ಯವಸ್ಥೆಯ ನಿರ್ಮೂಲನೆ ಮತ್ತು ಭ್ರಾತೃತ್ವದ ಸಮಾಜದ ನಿರ್ಮಾಣಕ್ಕಾಗಿ ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ ಅವರ ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಶಾಸಕರು ಕೆ. ಶಿವಕುಮಾರ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ‌ ಎಸ್. ಯುಕೇಶ್ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್‌ ಆಸಿಫ್‌,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ .ಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್ -1 ನ ಜನಾರ್ಧನ್ ಎ. ಏನ್, ಅಪಾರ ಪೊಲೀಸ್ ಆಯುಕ್ತ ನಾಗೇಶ್, ಗಣ್ಯರಾದ ಮಲೆಯೂರು ಸೋಮಣ್ಣ, ವಿವಿಧ ಸಂಘನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Call Now Button