Online News in ಕನ್ನಡ

ಮೈಸೂರಿನ ರೈಲ್ವೆ ಗೂಡ್ಸ್‌ ಶೆಡ್‌ ಸ್ಥಳಾಂತರಕ್ಕೆ ಹೆಚ್ಡಿಕೆ-ಸೋಮಣ್ಣ ಹುನ್ನಾರ

ಮೈಸೂರು: ಮೈಸೂರು ನಗರದಲ್ಲಿರುವ ರೈಲ್ವೇ ಗೂಡ್ಸ್‌ ಶೆಡನ್ನು ಪಾಂಡವಪುರಕ್ಕೆ ಸ್ಥಳಾಂತರಿಸಲು ಕೇಂದ್ರ ಸಚಿವರಾದ ವಿ. ಸೋಮಣ್ಣ ಮತ್ತು ಹೆಚ್.ಡಿ.ಕುಮಾರಸ್ವಾಮಿ ಹುನ್ನಾರ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದ್ದಾರೆ.
ಇಂದಿಲ್ಲಿ ಮಾಧ್ಯಮಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಮೈಸೂರು ಮಹಾರಾಜರು ನಿರ್ಮಿಸಿದ ರೈಲ್ವೆ ಗೂಡ್ಸ್‌ ಶೆಡನ್ನು ಮೈಸೂರಿನಿಂದ ಸ್ಥಳಾಂತರಿಸಲು ರಾಜವಂಸ್ಥರೇ ಆದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಮ್ಮತಿ ಸೂಚಿಸಿರುವುದು ದುರಂತದ ಸಂಗತಿ ಎಂದು ತಿಳಿಸಿದರು.
1882ರಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ರೈಲ್ವೆ ಶೆಡ್‌ ಅನ್ನು ಸುಮಾರು 10 ಸಾವಿರ ಜನರು ಅವಲಂಬಿಸಿದ್ದಾರೆ. ಪ್ರತಿ ದಿನ 600ಕ್ಕೂ ಹೆಚ್ಚು ಟ್ರಕ್‌ ಲೋಡ್‌ ಮತ್ತು ಅನ್‌ ಲೋಡ್‌ ಆಗುತ್ತಿದೆ. ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ರೈಲ್ವೆ ಶೆಡ್‌ನಿಂದ ವಾರ್ಷಿಕ ಸುಮಾರು 4,900 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇಂತಹ ಶೆಡನ್ನು ಬೇರೆ ಜಿಲ್ಲೆಗೆ ಸ್ಥಳಾಂತರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈಗಿರುವ ರೈಲ್ವೆ ಶೆಡ್‌ ಜಾಗದಲ್ಲಿ ವಂದೇ ಮಾತರಂ ರೈಲು ನಿಲುಗಡೆಗೆ ಅವಕಾಶ ಮಾಡಲು ಶೆಡ್‌ ಸ್ಥಳಾಂತರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಒಂದು ಟ್ರೇನ್‌ ನಿಲ್ಲಿಸಲು ಇಷ್ಟು ದೊಡ್ಡ ವ್ಯಾವಹಾರ ಕೇಂದ್ರವಾಗಿರುವ ಗೂಡ್ಸ್‌ ಶೆಡನ್ನು ಹೆಚ್.ಡಿ.ಕುಮಾರಸ್ವಾಮಿ ಮತ್ತು ಸೋಮಣ್ಣ ಇಬ್ಬರೂ ಸೇರಿ ಸ್ಥಳಾಂತರಕ್ಕೆ ಸಂಚು ರೂಪಿಸಿದ್ದಾರೆ ಎಂದು ಅಪಾದಿಸಿದರು.
ಕೇಂದ್ರ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಿಂದ ಹೊಸದಾಗಿ ನಮಗೆ ಯೋಜನೆಗಳನ್ನು ತರುವುದನ್ನು ಬಿಟ್ಟು, ಇಲ್ಲಿರುವ ರೈಲ್ವೆ ಶೆಡನ್ನೇ ತಮ್ಮೂರಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಮುಂದೆ ಚಾಮುಂಡಿಬೆಟ್ಟನೂ ಸ್ಥಳಾಂತರಿಸಿಕೊಂಡರೆ ಮೈಸೂರಿನ ಜನ ಎಲ್ಲಿಗೆ ಹೋಗಬೇಕು ಎಂದು ಲೇವಡಿ ಮಾಡಿದರು.
ಈಗಾಗಲೇ ಕೂಲಿ ಕಾರ್ಮಿಕರು, ಶೆಡ್‌ ಅವಲಂಬಿದ ವರ್ಗಗಳೊಂದಿಗೆ ಸಭೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣವನ್ನೇ ಬಂದ್‌ ಮಾಡಿ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಡಿಸಿಸಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Call Now Button