ಬೆಂಗಳೂರು: ಧಾರವಾಡ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಹಾಗೂ ಇತರೆ 15 ಅಪರಾಧಿಗಳಿಗೂ ಜೀವಾವಾಧಿ ಶಿಕ್ಷೆ ವಿಧಿಸಿರುವ ಕೋರ್ಟ್ 19ನೇ ಅಪರಾಧಿ ಚೆನ್ನಕೇಶವ ಟಿಂಗರಿಕರ್ ಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ನ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಇಂದು ಮಹತ್ವದ ತೀರ್ಪು ಪ್ರಕಟಿಸಿದರು. ಹಾಗೂ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿ ನೀಡುವಂತೆ ವಿನಯ್ ಕುಲಕರ್ಣಿಗೆ ಸೂಚಿಸಿದ್ದಾರೆ.
ವಿವರ: 2016ರಲ್ಲಿ ನಡೆದ ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರ 16 ಮಂದಿ ಅಪರಾಧಿಗಳು ಎಂದು ಘೋಷಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 17ಕ್ಕೆ ಘೋಷಿಸಲು ನಿರ್ಧರಿಸಿತ್ತು.
ಇಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಯ ವಾದಗಳನ್ನು ಆಲಿಸಿತು. ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಯೋಗೇಶ್ ಗೌಡರ್ ಹತ್ಯೆಗೆ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದರು.
ಆರೋಪಿಗಳನ್ನು ಕಾನೂನುಬಾಹಿರ ಸಭೆ, ಗಲಭೆ ಮತ್ತು ಕೊಲೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿಯೂ ದೋಷಿಗಳೆಂದು ಘೋಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದರಲ್ಲಿ ಐಪಿಸಿ ಸೆಕ್ಷನ್ 302 ಜೊತೆಗೆ ಸೆಕ್ಷನ್ 120(ಬಿ) ಸೇರಿದೆ. ಅಪರಾಧಿಗಳಲ್ಲಿ ಹಲವರನ್ನು ಹೆಚ್ಚುವರಿಯಾಗಿ ಸಾಕ್ಷ್ಯಗಳ ನಾಶಕ್ಕೆ ಕಾರಣರಾದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ಇನ್ನು 20ನೇ ಆರೋಪಿಯಾಗಿದ್ದ ವಾಸುದೇವ ರಾಮ ನಿಲೇಕಣಿ (ಧಾರವಾಡ ಉಪನಗರ ವಿಭಾಗದ ಎಸಿಪಿ) ಹಾಗೂ 21ನೇ ಆರೋಪಿಯಾಗಿದ್ದ ಸೋಮಶೇಖರ ಬಸಪ್ಪ ನ್ಯಾಮಗೌಡ (ವಿನಯ್ ಕುಲಕರ್ಣಿ ಆಪ್ತ ಸಹಾಯಕ) ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿತ್ತು.
2016ರ ಜೂನ್ ನಲ್ಲಿ ಧಾರವಾಡದ ಜಿಮ್ನಾಷಿಯಂನಲ್ಲಿ ಬಿಜೆಪಿ ನಾಯಕ ಮತ್ತು ಧಾರವಾಡ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಯೋಗೇಶ್ ಗೌಡರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ನಂತರ ಸಿಬಿಐಗೆ ಹಸ್ತಾಂತರಿಸಲಾಗಿದ್ದು ಪ್ರಕರಣ ಸಂಬಂಧ 100ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.


