ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಹುತೇಕ ಸಚಿವರ ವಿರೋಧ ವ್ಯಕ್ತವಾಗಿದೆ. ಕಳೆದ ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಆಪ್ತ ಸಚಿವರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾಯಕತ್ವ ಬದಲಾವಣೆಯ ಹೈಕಮಾಂಡ್ ಪುನರ್ ಪರಿಶೀಲನೆಗೆ ಒತ್ತಡ ಹೇರುವ ಬಗ್ಗೆ ಚರ್ಚೆಗಳು ನಡೆದಿದೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್, ಜಮೀರ್ ಅಹಮದ್, ಸತೀಶ್ ಜಾರಕೀಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್ ಅಸಮ್ಮತಿ ಸೂಚಿಸಿದ್ದು, ಹೈಕಮಾಂಡ್ ನಿಲುವಿನ ವಿರುದ್ಧ ಸೆಟೆದು ನಿಲ್ಲುವ ಮಟ್ಟದ ಮಾತುಕತೆ ನಡೆದಿದೆ. ಆದರೆ, ಸಚಿವ ಪ್ರಿಯಾಂಕ ಖರ್ಗೆ ಮಾತ್ರ ಹೈಕಮಾಂಡ್ ನಿಲುವಿಗೆ ತಲೆಯಾಡಿಸಿದ್ದಾರೆ ಎನ್ನಲಾಗಿದೆ.
ʻನಿಮ್ಮನ್ನೇ ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವೆ, ಯಾವುದೇ ಗುರುತರ ಆರೋಪಗಳಿಲ್ಲದಿದ್ದರೂ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಮುಂದಿನ ರಾಜಕೀಯ ಭವಿಷ್ಯ ಕಷ್ಟಕರವಾಗಲಿದೆ, ಅಲ್ಲದೆ, ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೂ ಧಕ್ಕೆಯಾಗಲಿದೆ. ನಮ್ಮ ಮಕ್ಕಳ ರಾಜಕೀಯ ಭವಿಷ್ಯ ಹಾಳಾಗಲಿದೆʼ ಎಂಬುವುದು ಆಪ್ತರ ಅಭಿಪ್ರಾಯವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ದಿಢೀರ್ ರಾಜೀನಾಮೆಯಿಂದ ಅವರನ್ನೇ ನಂಬಿಕೊಂಡಿರುವ ಅನೇಕ ಸಚಿವರು, ಶಾಸಕರಿಗೆ ಅಘಾತವಾಗಲಿದೆ. ಅಲ್ಲದೆ, ಅಹಿಂದ ವರ್ಗಗಳಿಗೆ ಕಾಂಗ್ರೆಸ್ ಮಾಡಿದ ಅವಮಾನವಾಗಲಿದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆಯುವ ಸಾಹಸಕ್ಕೆ ಮುಂದಾಗಬಾರದು ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಒಂದು ಗುಂಪು ದೆಹಲಿಗೆ ತೆರಳುವ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಅಭಿಮಾನಿಗಳ ಆಕ್ರೋಶ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಅಸಂಖ್ಯಾತ ಅಭಿಮಾನಿಗಳು ಕಂಗಾಲಾಗಿದ್ದು ರಾಜ್ಯದ ನಾನಾ ಭಾಗಗಳಿಂದ ನಾಯಕತ್ವ ಬದಲಾವಣೆಗೆ ಅಸಮಧಾನ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ವರುಣಾ, ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಾದರೆ ಕಾರಣ ನೀಡಲೇಬೇಕು. ಹೀಗೆ ಏಕಾಏಕಿ ರಾಜೀನಾಮೆಗೆ ಮಮುಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ರಾಜ್ಯದ ಅಹಿಂದ ವರ್ಗಗಳು ಸಿದ್ದರಾಮಯ್ಯ ಪರ ಇದುದ್ದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎಂದು ಅಭಿಮಾನಿಗಳು ಮಾಧ್ಯಮಗಳ ಮುಂದೆ ಬಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.


