Online News in ಕನ್ನಡ

ʻಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ ಬಿಟ್ಟು ಹೋಗಲ್ಲʼ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿಶ್ವಾಸ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಶಾಸಕರಾದ ಜಿ.ಟಿ. ದೇವೇಗೌಡರು ಜಾತ್ಯಾತೀತ ಜನತಾದಳ ಪಕ್ಷವನ್ನು ಬಿಟ್ಟು ಎಲ್ಲೂ ಹೋಗಲ್ಲ. 2028ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಹಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಮತ್ತು ಸಾರಾ ಮಹೇಶ್‌ ಕುಳಿತು ಮಾತನಾಡುತ್ತೇವೆ. ಜಿ.ಟಿ.ದೇವೇಗೌಡರು ನಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಈಗಾಗಲೇ ಖುದ್ದು ಜಿಟಿ ದೇವೇಗೌಡರು ಅವರು ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಹೆಚ್.ಡಿ.ದೇವೇಗೌಡರಿಗೆ ತಪ್ಪಿದ ಟಿಕೆಟ್:‌
ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ದೊಡ್ಡದಲ್ಲ. ಪ್ರಧಾನಿ ಮೋದಿ ಅವರ ಕೈ ಬಲಪಡಿಸುವುದು ನಮಗೆ ಮುಖ್ಯ. ದೇವೇಗೌಡರು ರಾಜ್ಯಸಭೆಯ ಸ್ಥಾನವನ್ನು ಕೇಳಿರಲಿಲ್ಲ. ಮಾಧ್ಯಮಗಳಲ್ಲಿ ಆ ವಿಚಾರ ಪ್ರಸ್ತಾಪವಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷರು ಒಮ್ಮೆ ದೇವೇಗೌಡರ ಹೆಸರು ಪ್ಯಾನಲ್‌ನಲ್ಲಿ ಇದೆ ಎಂದರು. ಮತ್ತೊಮ್ಮೆ ಇಲ್ಲ ಎಂದರು. ಈ ಬಗ್ಗೆ ನಮಗೆ ಯಾವುದೇ ಅಸಮಧಾನವಿಲ್ಲ. ನಾವು ಯಾರಿಗೂ ಟಿಕೆಟ್‌ ಕೇಳಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಒಕ್ಕಲಿಗರ ಮತ ಚದುರಲ್ಲ:
ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾದ ಮಾತ್ರಕ್ಕೆ ಒಕ್ಕಲಿಗ ಮತಗಳು ಚದುರಿ ಹೋಗಲಿದೆ ಎಂಬ ಮಾತು ಸುಳ್ಳು. ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಒಕ್ಕಲಿಗರು ನಮ್ಮನ್ನು ಬಿಟ್ಟು ಹೋಗಲಿಲ್ಲ. ಈಗಲೂ ಅಷ್ಟೆ. ದೇವೇಗೌಡರ ರಾಜಕಾರಣ ಮುಗಿದೆ ಹೋಯಿತು ಎಂದು ಹಲವರು ಹಿಂದೆ ಹೇಳಿದ್ರು. ಈಗಲೂ ದೇವೇಗೌಡರು ಸಕ್ರಿಯ ರಾಜಕೀಯದಲ್ಲಿ ಇದ್ದಾರೆ. ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿರುವುದಕ್ಕೂ ಒಕ್ಕಲಿಗರ ಮತಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

 

Call Now Button