ಮೈಸೂರು: ಡ್ರಗ್ಸ್ ಬೆನ್ನತ್ತಿ ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸುಮಾರು ೧೦ ಕೋಟಿ ರೂ. ಮೌಲ್ಯದ ೨೫ ಕೆಜಿ ಮೆಫೆಡ್ರೋನ್, ೧.೬ ಕೆಜಿ ಅಫೀಮು ಮತ್ತು ೨೫. ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂದಿಸಿರುವುದಾಗಿ ಎನ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಪಿಗಳ ಬಂಧನದ ಬಳಿಕ ಎನ್‌ಸಿಬಿಯ ಬೆಂಗಳೂರು ವಲಯ ಘಟಕವು ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಘಟಕ ಮೇಲೆ ದಾಳಿ ನಡೆಸಿ, ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಎನ್‌ಸಿಬಿ ತಿಳಿಸಿದೆ.
ಈ ಪ್ರಕರಣದಲ್ಲಿ ಇದುವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳು (ಬೀದಿ ಮಾರುಕಟ್ಟೆ), 25.6 ಲಕ್ಷ ರೂ. ನಗದು, ಟೊಯೋಟಾ ಫಾರ್ಚೂನರ್ ಎಸ್‌ಯುವಿ ಮತ್ತು 500 ಕೆಜಿಗಿಂತ ಹೆಚ್ಚು ತೂಕದ ಡ್ರಗ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೃಹ ಸಚಿವರ ಹೇಳಿಕೆ ಸುಳ್ಳಾಯಿತೆ ?

ಈ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೈಸೂರಿನಲ್ಲಿ ಮಾತನಾಡಿ, ಎನ್‌ಸಿಬಿಯಿಂದ ನಡೆದಿರುವ ದಾಳಿ ಹಳೇ ಪ್ರಕರಣದ ಮುಂದುವರೆದ ಭಾಗವಾಗಿದೆ. ದಾಳಿಯ ಸಂದರ್ಭದಲ್ಲಿ ಅದು ಫಿನಾಯಿಲ್ ಘಟಕ ಎಂದು ಗೊತ್ತಾಗಿದ್ದು, ಡ್ರಗ್ಸ್ ಅಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಸಹ ಡ್ರಗ್ಸ್ ಪತ್ತೆಯಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿದ್ದರು.
ಆದರೆ, ಈಗ ಸ್ವತಃ ಎನ್‌ಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯನ್ನು ಬಹಿರಂಗ ಪಡಿಸಿರುವುದು ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರಿಗೆ ಮುಖಭಂಗವಾದಂತ್ತಾಗಿದೆ.
ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆ ಕಲಿತಿದ್ದ ಮಾಸ್ಟರ್ ಮೈಂಡ್ :
ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆಯನ್ನು ಕಲಿತಿದ್ದ ಮಾಸ್ಟರ್ ಮೈಂಡ್ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಸೂರಿನಲ್ಲಿ ಈ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಎಂದು ಎನ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ಅಫೀಮ್ ಮತ್ತು ಸ್ಮ್ಯಾಕ್ ಮಾರಾಟ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ವಿಷ್ಣೋಯ್, ಎನ್‌ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಸಿಂಥಟಿಕ್ ಡ್ರಗ್ಸ್ ತಯಾರಿಕೆಯ ಪ್ರಕ್ರಿಯೆ, ಮಾರುಕಟ್ಟೆ ಬೇಡಿಕೆ ಮತ್ತು ಸರಬರಾಜು ಜಾಲದ ಬಗ್ಗೆ ತಿಳಿದುಕೊಂಡಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, 2024ರಲ್ಲಿ ಮೈಸೂರಿನಲ್ಲಿ ಗುಪ್ತವಾಗಿ ಉತ್ಪಾದನಾ ಘಟಕ ಸ್ಥಾಪಿಸಿ, ಅನೇಕ ಬಾರಿ ಡ್ರಗ್ಸ್ ಉತ್ಪಾದನೆ ಮತ್ತು ವಿತರಣೆ ನಡೆಸಿದ್ದ.

ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿದ್ದ ಘಟಕದಲ್ಲಿ ಡ್ರಗ್ಸ್ ತಯಾರಿಕೆಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳು ಮತ್ತು ಸಂಪೂರ್ಣ ಪ್ರಯೋಗಾಲಯ ವ್ಯವಸ್ಥೆ ಪತ್ತೆಯಾಗಿದೆ. ಈವರೆಗೆ ಬಂಧಿತರಾದ ನಾಲ್ವರೂ ರಾಜಸ್ಥಾನದ ಜಾಲೋರ್ ಜಿಲ್ಲೆಯವರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಸದಸ್ಯರು, ಪ್ರಯೋಗಾಲಯ ಉಪಕರಣಗಳು ಮತ್ತು ರಾಸಾಯನಿಕಗಳ ಸರಬರಾಜು ಮೂಲ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.
ಹೆಬ್ಬಾಳದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕ ನಡೆಸುತ್ತಿದ್ದ ಗಣಪತ್ ಎಂಬ ವ್ಯಕ್ತಿಯನ್ನು ಎನ್‌ಸಿಬಿ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದೆ ಎಂದು ತಿಳಿದುಬಂದಿದೆ.
ಇನ್ನು ಭಾರತದಲ್ಲಿ ಮಿಫೆಡ್ರೋನ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ಎಚ್ಚರಿಕೆ ನೀಡಿರುವ ಎನ್‌ಸಿಬಿ, ಮಿಫೆಡ್ರೋನ್ ತಯಾರಿಕೆಗೆ ಬಳಸುವ 2-ಬ್ರೋಮೋ-4’-ಮೆಥೈಲ್ಪ್ರೊಪಿಯೋಫೆನೋನ್ ಮತ್ತು ಮೊನೋಮೆಥೈಲಮೈನ್ ಎಂಬ ಎರಡು ಪ್ರಮುಖ ರಾಸಾಯನಿಕಗಳ ಖರೀದಿದಾರರ ಹಿನ್ನೆಲೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ.


