ಮೈಸೂರು: ಕೊಟ್ಟ ಸಾಲವನ್ನು ವಾಪಾಸ್ಸು ಕೇಳಲು ಹೋದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ಹಿಂದುಳಿದ ವರ್ಗದಗಳ ಮುಖಂಡ ಕೋಟೆಹುಂಡಿ ಮಹದೇವ್ ಅವರು ದೂರುದಾರರಾಗಿದ್ದು, ತಾವು ನೀಡಿದ್ದ ಸಾಲದ ಹಣವನ್ನು ಕೇಳಲು ಫೆಬ್ರವರಿ ತಿಂಗಳಲ್ಲಿ ನಗರದ ಜಲದರ್ಶಿನಿ ಅತಿಥಿಗೃಹಕ್ಕೆ ತೆರಳಿದ್ದಾಗ ಅಡಗೂರು ಹೆಚ್.ವಿಶ್ವನಾಥ್ ತಮ್ಮ ಮೇಲೆ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ʻನಾನು 50 ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕೋಟೆಹುಂಡಿ ಮಹದೇವ ನನ್ನ ಮನೆ ಮುಂದೆ ಬಂದು ನಿಲ್ಲುತ್ತಿದ್ದ. ನನಗೆ 55 ಲಕ್ಷ ರೂ. ಸಾಲ ಕೊಡಲು ಮಹದೇವ್‌ಗೆ ಅಷ್ಟು ಹಣ ಎಲ್ಲಿಂದ ಬಂತು. ನನಗೆ ಯಾವುದೇ ಹಣ ಕೊಟ್ಟಿಲ್ಲ. ಈಗಾಗಲೇ ಪೊಲೀಸರು ನೀಡಿರುವ ನೋಟಿಸ್‌ಗೆ ನಾನು ಉತ್ತರ ನೀಡಿದ್ದೇನೆ. ಆದರೆ, ಸಿಎಂ ಪುತ್ರನ ಕುಮ್ಮಕ್ಕಿನಿಂದ ಈ ಸುದ್ದಿಯಲ್ಲಿ ಪತ್ರಿಕೆಗಳಿಗೆ ನೀಡಿ ನನ್ನ ತೇಜೋವಧೆ ಮಾಡಲಾಗುತ್ತಿದೆ
– ಅಡಗೂರು ಹೆಚ್.ವಿಶ್ವನಾಥ್,
ವಿಧಾನ ಪರಿಷತ್ ಸದಸ್ಯ.
—————————————————————————————————————————————————————————————————————–
ನಾನು ದುಡ್ಡು ತೆಗೆದುಕೊಂಡಿಲ್ಲ ಎಂದು ವಿಶ್ವನಾಥ್ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಆಣೆ ಮಾಡಲಿ. ನನಗೆ ವಿಶ್ವನಾಥ್ ಅನ್ಯಾಯ ಮಾಡಿದ್ದಾರೆ. ಎಂಟಿಬಿ ನಾಗರಾಜ್ ಅವರಿಂದ ವಿಶ್ವನಾಥ್‌ಗೆ 35 ಲಕ್ಷ ರೂ. ಸಾಲ ಕೊಡಿಸಿದ್ದೆ. ಇದಕ್ಕಾಗಿ ನನ್ನ ಆಸ್ತಿಯನ್ನು ಅಡಮಾನ ಇಟ್ಟಿದ್ದೇನೆ. ಇದೀಗ ಬಡ್ಡಿ ಬೆಳೆದು 55 ಲಕ್ಷ ರೂ.ಗಳಿಗೂ ಹೆಚ್ಚು ಸಾಲವಾಗಿದೆ. ವಿಶ್ವನಾಥ್ ಹಣ ಪಡೆದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಪ್ರಕರಣಕ್ಕೂ ಸಿಎಂ ಪುತ್ರ ಡಾ. ಯತೀಂದ್ರ ಅವರಿಗೂ ಯಾವುದೇ ಸಂಬಂಧವಿಲ್ಲ.
– ಕೋಟೆಹುಂಡಿ ಮಹದೇವ್
2013ರಲ್ಲಿ ಹೆಚ್.ವಿಶ್ವನಾಥ್ ಸಂಸದರಾಗಿದ್ದ ಅವಧಿಯಲ್ಲಿ ಇದೇ ಕೋಟೆಹುಂಡಿ ಮಹದೇವು ಅವರು ಮಾಜಿ ಶಾಸಕ ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್ ಮತ್ತು ಇವರ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ 55 ಲಕ್ಷ ರೂ.ಗಳ ಸಾಲವನ್ನು ಕೊಡಿಸಿದ್ದೆ. ಹಣವನ್ನು ವಾಪಾಸ್ ನೀಡುವಂತೆ ಅನೇಕ ಬಾರಿ ಕೋರಿಕೊಂಡರೂ ಪ್ರಯೋಜನವಾಗಲಿಲ್ಲ.
ಫೆಬ್ರವರಿ ತಿಂಗಳಲ್ಲಿ ಜಲದರ್ಶಿನಿಯ ಅವರ ಕಚೇರಿ ಬಳಿಗೆ ತೆರಳಿ ಸಾಲದ ಹಣ ವಾಪಾಸ್ ನೀಡಲು ಕೋರಿಕೊಂಡಾಗ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ದೂರು ದಾಖಲಿಸಿರಲಿಲ್ಲ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಕೋರ್ಟ್ ಆದೇಶದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮಹದೇವ್ ʻವಿಜಯಕಾಲʼ ಪತ್ರಿಕೆಗೆ ತಿಳಿಸಿದ್ದಾರೆ.
ಈ ಸಂಬಂಧ ವಿಶ್ವನಾಥ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಪೊಲೀಸರು ಇವರಿಗೆ ಹೇಳಿಕೆ ಪಡೆದಿದ್ದಾರೆ.


