ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗ ಬಲೂನ್‌ಗೆ ಗಾಳಿ ತುಂಬುವ ಸಿಲೆಂಡರ್ ಸ್ಪೋಟಗೊಂದು ಓರ್ವ ವ್ಯಕ್ತಿ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ 8.30ರ ಆಸುಪಾಸಿನಲ್ಲಿ ಜರುಗಿದ್ದು, ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಮೃತ ವ್ಯಕ್ತಿಯನ್ನು ಬಲೂನ್ ಮಾರುವ ಸಲೀಂ ಎಂದು ಗುರುಸಿಲಾಗಿದೆ.
ಅರಮನೆ ನೋಡಲೆಂದು ಬಂದಿದ್ದ ಮೈಸೂರಿನ ಬೆಳವಾಡಿ ನಿವಾಸಿ ಲಕ್ಷ್ಮೀ, ದಾವರಣಗೆರೆಯ ದಾನೇಶ್ವರ ನಗರದ ನಿವಾಸಿ ಕೊಟ್ರೇಶ್, ನಂಜನಗೂಡಿನ ಮಂಜುಳಾ, ಮತ್ತು ರಂಜಿತಾ ಎಂಬುವರು ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ, ನೂರು ಮೀಟರ್ ಸುತ್ತಳತೆಯಲ್ಲಿದ್ದವರ ಎದೆ ನಡುಗಿಸಿದೆ. ಆರಂಭದಲ್ಲಿ ಬಾಂಬ್ ಬ್ಲಾಸ್ಟ್ ಇರಬಹುದು ಎಂದು ಭಾವಿಸಿದ್ದ ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಕೆ.ಆರ್. ಆಸ್ಪತ್ರೆಗೆ ರವಾನಿಸಲಾಯಿತು. ಅರಮನೆಯಲ್ಲಿ ಮಾಗಿ ಉತ್ಸವ ನಡೆಯುತ್ತಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.


