ಮೈಸೂರು: ಹಿಂದುಳಿದ ಸಣ್ಣ ಸಣ್ಣ ಜಾತಿಗಳು ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಅಧಿಕಾರವನ್ನು ಪಡೆದುಕೊಳ್ಳಬೇಕು. ಶಿಕ್ಷಣ ಇದಕ್ಕೆಲ್ಲ ದಾರಿ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು. ಗಾಣಿಗ ಮಹಾಸಭಾಯ ವತಿಯಿಂದ ಮೈಸೂರಿನ ಸರಸ್ವತಿಪುರಂ ಗಾಣಿಗರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ, ಕ್ಯಾಲೆಂಡರ್ ಬಿಡುಗಡೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಗಾಣಿಗ ಸಮಾಜ ಹಿಂದುಳಿದ ವರ್ಗಗಳ ಸಾಲಿನಲ್ಲಿ ಬರುವಂತಹ ಸಮಾಜ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಗತಿ ಕಾಣಬೇಕಾದ ಸಮಾಜ. ಇಂದು ಸಣ್ಣ ಸಣ್ಣ ಸಮುದಾಯಗಳು ಸಮಾಜದಲ್ಲಿ ಬಹಳಷ್ಟಿದ್ದು ಮುಖ್ಯವಾಹಿನಿಗೆ ಬರಲು ಹರಸಾಹಸ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಸಂಘಟಿತರಾದಾಗ , ಶಿಕ್ಷಿತರಾದಾಗ ಮಾತ್ರ ಹಿಂದುಳಿದ ವರ್ಗಗಳು ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.
ಹಿಂದೆ ಕುಲಕಸುಬುಗಳನ್ನು ಅವಲಂಬಿಸಿ ಬದುಕಬೇಕಾದ ಅನಿವಾರ್ಯತೆ ಇತ್ತು.ಆದರೆ ಇವತ್ತಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜ್ಞಾನಾರ್ಜನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಸರಿಯಾದ ಶಿಕ್ಷಣ ವಿಲ್ಲದಿದ್ದರೆ ಭವಿಷ್ಯದಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಮನೆಯಲ್ಲಿ ಹೆಚ್ಚು ಶಿಕ್ಷಿತರಾದರೆ ಕುಟುಂಬದ ಏಳಿಗೆ ಆಗುತ್ತದೆ.ಆ ಮೂಲಕ ಸಮುದಾಯವೂ ಗಟ್ಟಿಗೊಳೊಳುತ್ತದೆ. ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ವಿದ್ಯಾಭ್ಯಾಸ, ತಾಂತ್ರಿಕ ತರಬೇತಿಗಳನ್ನು ಪಡೆಯಬೇಕು.ಉದ್ಯೋಗಗಳನ್ನು ಪಡೆಯಬೇಕು.ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ಪೋಷಕರು, ಬೆಳೆಸಿದ ಸಮಾಜವನ್ನು ಎಂದು ಮರೆಯಬಾರದು.ಸಮಾಜದ ಅಭಿವೃದ್ಧಿಗೆ ಕಿಂಚಿತ್ತಾದರೂ ಯೋಚಿಸಬೇಕು ಆಗ ಮಾತ್ರ ಶಿಕ್ಷಣ ಪಡೆದಕ್ಕೂ ಸಾರ್ಥಕತೆ ಬರುತ್ತದೆ.ಹಿಂದುಳಿದ ಸಮಾಜದ ಮಕ್ಕಳು ಚೆನ್ನಾಗಿ ಓದಬೇಕು.ತಿಳಿದುಕೊಳ್ಳಬೇಕು.ಇತರರಂತೆ ಮುಖ್ಯ ವಾಹಿನಿಗೆ ಬರಬೇಕು ಆಗ ಸಮಾಜವು ಗುರುತಿಸುತ್ತದೆ ಎಂದು ತಿಳಿಸಿದರು.ಗಾಣಿಗ ಸಮಾಜದ ಬಂಧುಗಳು ಸಮಾಜಕ್ಕೆ ಆಗ ಬೇಕಾದ ಕೆಲಸ ಕಾರ್ಯಗಳು ಇದ್ದಲ್ಲಿ ಖಂಡಿತವಾಗಿ ಬನ್ನಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಬಳಿ ಮನವಿ :
ಮಾಡೋಣಾ ಅನುದಾನ ಪಡೆದು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಭರವಸೆ ನೀಡಿದರು. ಮೈಸೂರು, ಮಂಡ್ಯ, ಚಾಮರಾಜನಗರ ಭಾಗದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಮೇಯರ್ ಅನಂತು ಹಾಜರಿದ್ದರು.


