ಮೈಸೂರು: ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಂತ ಹಂತವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರ ಪಾಲಿಕೆಯಷ್ಟೇ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುವ ಜತೆಗೆ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಹೂಟಗಳ್ಳಿ ಎಚ್.ಕೆ.ಫಂಕ್ಷನ್ಹಾಲ್ನಲ್ಲಿ ಭಾನುವಾರ ಆಯೋಜಿಸಿದ್ದ ಹೂಟಗಳ್ಳಿ ನಗರಸಭೆ ವತಿಯಿಂದ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಬೀದಿನಾಯಿಗಳ ಹಾವಳಿ, ಒಳಚರಂಡಿ ನಿರ್ವಹಣೆ ಮತ್ತು ಬೀದಿ ದೀಪಗಳ ನಿರ್ವಹಣೆ ಕುರಿತಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲೇ 18 ಗ್ರಾಮ ಪಂಚಾಯಿತಿ, ನಗರಪಾಲಿಕೆ ಐದು ವಾರ್ಡುಗಳು, ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆಯನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ನಾಲ್ಕು ದಿಕ್ಕುಗಳನ್ನು ಸಂಪರ್ಕ ಕಲ್ಪಿಸುವ ಪ್ರದೇಶವಾಗಿರುವ ಕಾರಣ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದರು. ಮೈಸೂರು ನಗರದ ರಿಂಗ್ ರಸ್ತೆಯ ಅಕ್ಕಪಕ್ಕದ ಗ್ರಾಪಂಗಳು, ಬಡಾವಣೆಗಳು, ವಿಜಯನಗರ ಮೂರನೇ ಹಂತ, ನಾಲ್ಕನೇ ಹಂತವನ್ನು ಮೈಸೂರು ನಗರಪಾಲಿಕೆಗೆ ಸೇರಿಸಲು ಯುದ್ಧ ಮಾಡಿದಂತೆ ಹೋರಾಟ ಮಾಡಿದ್ದೆ. ನಗರಪಾಲಿಕೆಗೆ ಸೇರ್ಪಡೆಗೊಳಿಸಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲು ಪ್ರಸ್ತಾವನೆ ಇಟ್ಟಾಗ ಬಿಜೆಪಿ, ಜಾ.ದಳ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಐದು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರೆ ಮಾತ್ರ ಸೇರ್ಪಡೆ ಮಾಡಿಸಿಕೊಳ್ಳುತ್ತೇವೆಂದು ನಿರ್ಣಯ ಕೈಗೊಂಡರು.
ಇದರಿಂದಾಗಿ ಅಪಮಾನವಾಗಿ ವಾಪಸ್ ಬಂದು ಬಿಟ್ಟೆ. ನಂತರ, ಅಂದಿನ ಸಂಸದ ಪ್ರತಾಪ್ ಸಿಂಹ ಅವರನ್ನು ಕೂರಿಸಿಕೊಂಡು ಸಮಾಲೋಚನೆ ಮಾಡಿದಾಗ ಗ್ರಾಪಂಗಳನ್ನು ಪಾಲಿಕೆ ಸೇರಿಸಿಕೊಳ್ಳಲ್ಲ. ಬಡಾವಣೆಗಳಲ್ಲಿ ಸ್ವಚ್ಛ ಮಾಡಲ್ಲ. ಖಾತೆ ಕಂದಾಯ ಮಾಡಲ್ಲ. ಮುಡಾದ ಬಡಾವಣೆಗಳಲ್ಲೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿ ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆಯನ್ನು ರಚಿಸಲಾಯಿತು ಎಂದು ಹೇಳಿದರು. ಮುಡಾದಿಂದ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೊಡಲಾಗುತ್ತಿತ್ತು. ಆದರೆ, ಸರ್ಕಾರ ನಿಧಿ-1, ನಿಧಿ-2 ಎನ್ನುವಂತೆ ವಿಂಗಡಿಸಿದರು. ನಿಧಿ ಒಂದರಲ್ಲಿ ಹತ್ತಾರು ವರ್ಷಗಳ ಹಿಂದೆ ರಚನೆಯಾಗಿರುವ ಬಡಾವಣೆಗಳಿಗೆ ನಿರ್ವಹಣೆ ಮಾಡಬಹುದು ಹೊರತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಸುವಂತಿಲ್ಲ. ನಿಧಿ-2ರಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದರಿಂದ ತುಂಬಾ ಸಮಸ್ಯೆಯಾಯಿತು. ಹೀಗಾಗಿಯೇ, ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಲು ಹಗಲು-ರಾತ್ರಿ ವಿಧಾನಸೌಧದಲ್ಲಿ ಅಲೆದಾಡಿ ಅನುಮೋದನೆ ಕೊಡಿಸಿದ್ದರಿಂದಾಗಿ ಇಂದು ಅನುಕೂಲವಾಯಿತು ಎಂದು ಹೇಳಿದರು.
ಕೈಗಾರಿಕಾ ಪ್ರದೇಶಗಳಿಂದ 25ರಿಂದ 30 ಕೋಟಿ ರೂಪಾಯಿ ಬರುತ್ತಿದ್ದರು. ಈಗ ಕರ್ನಾಟಕ ಕೈಗಾರಿಕಾ ಪ್ರಾಧಿಕಾರ ರಚನೆ ಮಾಡಿದ ಮೇಲೆ ಬರುವ ತೆರಿಗೆ ನಿಂತು ಹೋಗಿದೆ. ಇದರಿಂದಾಗಿ ಅನೇಕ ಕಾಮಗಾರಿಗಳು ನಿಂತುಹೋಗಿವೆ. ಗ್ರಾಪಂಗಳು ಕಟ್ಟದೆ ಹೋಗಿರುವ ವಿದ್ಯುತ್ ಬಿಲ್ನ್ನು ಎಂಡಿಎದಿಂದ ಕಟ್ಟಿಸಿಕೊಡಲು ತೀರ್ಮಾನ ಮಾಡಿದ್ದೇನೆ ಎಂದು ಭರವಸೆ ನೀಡಿದರು. ಖಾಸಗಿ ಬಡಾವಣೆಗಳನ್ನು ಈಗ ಎಂಡಿಎಗೆ ವರ್ಗಾವಣೆ ಮಾಡಿ ಖಾತೆ ಮಾಡುವ ಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ನಿವೇಶನಗಳನ್ನು ವರ್ಗಾವಣೆ ಮಾಡಿರುವುದರಿಂದ ಕಂದಾಯ ಕಟ್ಟಿಸಿಕೊಂಡು ಖಾತೆ ಮಾಡಲಾಗುತ್ತಿದೆ. ನಿವೇಶನ, ಮನೆ ಮಾಲೀಕರು ಯಾರಿಗೂ ಒಂದು ಪೈಸೆ ಕಟ್ಟದೆ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 2007ರಲ್ಲಿ ಜೆನರ್ಮ್ ಯೋಜನೆಯಡಿ 60 ಎಂಎಲ್ಡಿ ನೀರನ್ನು ತರಲಾಯಿತು. ಕಬಿನಿ ಎರಡನೇ ಹಂತ, ಉಂಡುವಾಡಿ ಯೋಜನೆಯಿಂದ ದಿನದ 24ಗಂಟೆಗಳ ಕಾಲ ನೀರು ಒದಗಿಸುವುದಕ್ಕೆ ಕೆಲಸ ಶುರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ಒದಗಿಸಲಾಗುವುದು. ಸರ್ಕಾರದಿಂದ ಅನುದಾನ ತಂದು ರಸ್ತೆ, ಚರಂಡಿ ಎಲ್ಲವನ್ನು ಒದಗಿಸುತ್ತೇನೆ ಎಂದರು. ರಿಂಗ್ ರಸ್ತೆಯ ಬದಿಯಲ್ಲಿ ಕಸ ಹಾಕಿದರೆ, ಕೋಳಿ ತ್ಯಾಜ್ಯಗಳನ್ನು ಎಸೆಯುವವರು ಕಂಡುಬಂದರೆ ಅಂತಹವರ ಮೇಲೆ ಮೊಕದ್ದಮೆ ಹಕುವ ಜತೆಗೆ, ದಂಡ ವಿಧಿಸಬೇಕು. ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಇದಾದ ಬಳಿಕ ವಿಜಯನಗರ ನಾಲ್ಕನೇಹಂತಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಟ್ಯಾಂಕ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನುಷ್, ನಗರಸಭೆ ಎಇಇಗಳಾದ ಮಧು, ಗಿರಿಜಾ ಹಾಜರಿದ್ದರು.


