Online News in ಕನ್ನಡ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರಬೇಕು; ತನ್ವೀರ್ ಸೇಠ್

ಮೈಸೂರು: ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರವು ಕೇವಲ ಅಂಕಗಳಿಕೆಗೆ ಸೀಮಿತವಾಗದೇ, ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ಅಭಿಪ್ರಾಯಪಟ್ಟರು.

ಇಂದು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತದಲ್ಲಿರುವ ಸರ್ಕಾರಗಳು ತಮ್ಮ ಸಿದ್ಧಾಂತವನ್ನು ಪಠ್ಯದಲ್ಲಿ ಹೇರುವ ಕೆಲಸ ನಿಷೇಧವಾಗಬೇಕು. ಪಠ್ಯಕ್ರಮ ಪರಿಷ್ಕರಣೆ ಆಡಳಿತ ವ್ಯವಸ್ಥೆಗೆ ಸೀಮಿತವಾಗಬಾರದು. ಪ್ರತ್ಯೇಕವಾಗಿ ಸಮಿತಿ ರಚನೆ ಮಾಡಬೇಕು. ನಾನು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಗಣಿತ ಮತ್ತು ವಿಜ್ಞಾನ ಪುಸ್ತಕಗಳನ್ನು ತಂದೆ ಇದಕ್ಕೆ ಸಾಕಷ್ಟು ವಿರೋಧವಾಯಿತು ಎಂದು ತಿಳಿಸಿದರು.

ಶಿಕ್ಷಣದ ಜೊತೆಗೆ ಮೌಲ್ಯ ಕಲಿಸಿ

ಪಾಲಕರಿಗಿಂತ ಹೆಚ್ಚಿನ ಸಮಯವನ್ನು ಮಕ್ಕಳು ಶಿಕ್ಷಕರೊಂದಿಗೆ ಕಳೆಯುತ್ತಾರೆ. ಕೇವಲ ಶಿಕ್ಷಣದಿಂದ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಪಠ್ಯದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳ ಜೀವನಕ್ಕೆ ಪೋಷಣೆ ಮಾಡುವ ಸಂಸ್ಥೆಗಳು ಇಂದು ಹೆಚ್ಚಿನ ಅಗತ್ಯವಿದೆ. ಇದಕ್ಕಾಗಿ ಶಿಕ್ಷಕರು ಮಕ್ಕಳ ಪೋಷಕರೊಂದಿಗೆ ಸಮಾಲೋಚನೆ ನಡೆಸುವ ಪದ್ಧತಿ ಜಾರಿಗೆ ತರಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಮಾತನಾಡಿ, ಶಿಕ್ಷಣ ಎಂಬುದು ಎಲ್ಲರ ವಿಮೋಚನಾ ಅಸ್ತ್ರ. ನನ್ನ ಮೊದಲ ಗುರು ನನ್ನ ತಾತ. ಕನ್ನಡ ಓದಲು ಬರೆಯಲು ಕಾರಣ ಅವರೇ. ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತ, ಆರೋಗ್ಯ ಸುಧಾರಿಸುವ ವೈದ್ಯರು ಮತ್ತು ಬಾಳಿಗೆ ಬೆಳಕಾಗುವ ಶಿಕ್ಷಕರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಿಸಬೇಕು. ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದು, ಮೀಸಲಾತಿ ಜಾರಿಯಾದ ನಂತರ ಹುದ್ದೆಗಳನ್ನು ತುಂಬುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು ಎಂದಿದ್ದರು. ಈ ಮಾತನ್ನು ಶಿಕ್ಷಕರು ಅನುಷ್ಠಾನಕ್ಕೆ ತರಲು ಉತ್ತಮ ಶಿಕ್ಷಣ ನೀಡಬೇಕು. ಐಎಎಸ್, ಕೆಎಎಸ್ ಸೇರಿ ಉನ್ನತ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಏರಿಸುವುದು ಶಿಕ್ಷಕರೇ ಎನ್ನುವುದನ್ನು ಮರೆಯಬಾರದು. ಶಿಕ್ಷಕರು ಶಿಕ್ಷಣದ ಜೊತೆಗೆ ಸಂಸ್ಕೃತಿ ಕಲಿಸುತ್ತಾರೆ. ಮಕ್ಕಳ ಮೊಬೈಲ್ ಬಳಕೆಯನ್ನು ಬಿಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸೋಮೇಗೌಡ ಇನ್ನಿತರರು ಹಾಜರಿದ್ದರು.

Call Now Button