Online News in ಕನ್ನಡ

ಜ.29 ರಿಂದ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ಪಂಚಭಾಷಾ ನಟ ಪ್ರಕಾಶ್‌ ರಾಜ್‌ ರಾಯಭಾರಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ೧೭ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪಂಚಭಾಷಾ ನಟ ಪ್ರಕಾಶ್‌ ರಾಜ್‌ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಇಂದು ವಿಧಾನಸೌಧದ ಸಮಿತಿ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಪ್ರಕಟಿಸಿದರು. ಈ ಬಾರಿಯ ಚಲನಚಿತ್ರೋತ್ಸವದ ಥೀಮ್‌ ಮಹಿಳಾ ಸಬಲೀಕರಣ.
ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದ್ದು ಏಷಿಯನ್‌, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇದರಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಡಿಸೆಂಬರ್‌ ೩೧ ಕೊನೆಯ ದಿನಾಂಕವಾಗಿದೆ. ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.


ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದ ಮತ್ತು ಜನಮನ್ನಣೆಗಳಿಸಿದ ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳು ಭಾಗವಹಿಸುತ್ತಿವೆ. ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ, ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್‌ ರಿಪಬ್ಲಿಕ್, ಲೊಕಾರ್ನೂ (ಸಿಟ್ಟರ್ಲೆಂಡ್), ರಾಟರ್‌ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾ ಪ್ರಿಯರಿಗೆ ವೀಕ್ಷಿಸಲು ದೊರೆಯಲಿವೆ.
ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಸಮಾರೋಪ ಸಮಾರಂಭ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು , ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Call Now Button