ಚಾಮರಾಜನಗರ (ಗುಂಡ್ಲುಪೇಟೆ): ʻಜೀವʼ ಎನ್ನುವುದು ಸಕಲ ಜೀವರಾಶಿಗಳಿಗೂ ಒಂದೇ. ಅದು ಮನುಷ್ಯರಾಗಲಿ, ಪ್ರಾಣಿಯಾಗಲಿ ಅಥವಾ ಪಕ್ಷಿ, ಕೀಟವಾಗಿರಲಿ. ಪ್ರತಿ ಜೀವಕ್ಕೂ ಅದರೇ ಮಹತ್ವವಿದೆ, ಅರ್ಥವಿದೆʼ. ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಈ ಕಾಲಮಾನದಲ್ಲೂ ಅಲ್ಲಲ್ಲಿ ಮಾನವೀಯತೆಯನ್ನು ಎತ್ತಿ ಹಿಡಿಯುವ ನಿದರ್ಶನಗಳು ನಮಗೆ ಕಾಣಸಿಗುತ್ತದೆ. ಅಂತಹುದೇ ಒಂದು ಸಂಗತಿ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ಜರುಗಿದೆ.
ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ನರಳಾಡಿ ಮೃತಪಟ್ಟ ಕೋತಿಯ ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ, ಕೋತಿಯ ಮೃತ ದೇಹವನ್ನು ಮಣ್ಣು ಮಾಡಿದ್ದಾರೆ.

ಅಷ್ಟೇ ಅಲ್ಲ, ಮೂರನೇ ದಿನಕ್ಕೆ ಹಾಲುತುಪ್ಪ ಬಿಟ್ಟು, 11ನೇ ದಿನದಂದು ಅಕ್ಕಪಕ್ಕದ ಗ್ರಾಮದ ನಿವಾಸಿಗಳನ್ನೆಲ್ಲ ಬರಮಾಡಿಕೊಂಡು ತಿಥಿ ಕಾರ್ಯ ನೆರವೇರಿಸಿ, ತಿಥಿಯೂಟದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಬೇರೊಂದು ಕೋತಿಯ ಫ್ಲೆಕ್ಸ್ ಮಾಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಮುದ್ರಿಸಿ ಸಂತಾಪ ಸೂಚಿಸಲಾಗಿದೆ. ಅರಣ್ಯ ಜೀವಿಗಳ ಮೇಲಿನ ಕಾಳಜಿ ಮತ್ತು ಧಾರ್ಮಿಕ ಸಂಸ್ಕಾರದ ಮಹತ್ವವನ್ನು ಎತ್ತಿಹಿಡಿಯುವುದಕ್ಕಾಗಿ ಹಾಗೂ ಪ್ರಾಣಿಗಳಲ್ಲೂ ಮನುಷ್ಯರನ್ನು ಕಾಣಬೇಕೆಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಗ್ರಾಮದ ಯುವಕರು ಕೋತಿಯ ಅಂತ್ಯಸಂಸ್ಕಾರ ನೆರವೇರಿಸಿ ಪ್ರಾಣಿ ಪ್ರೇಮವನ್ನು ಮೆರೆದಿದ್ದಾರೆ.

ಘಟನೆಯ ವಿವರ:
ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪ ನಾಯಿಯ ದಾಳಿಗೆ ಸಿಕ್ಕ ಕೋತಿ ಗಂಭೀರವಾಗಿ ಗಾಯಗೊಂಡು ನರಳಿ ಪ್ರಾಣಬಿಟ್ಟಿತು. ಇದನ್ನು ಗಮನಿಸಿದ್ದ ಆ ಗ್ರಾಮದ ಯುವಕರು ಕೋತಿಯ ಮೃತ ದೇಹವನ್ನು ಹಿಂದೂ ಧರ್ಮದ ಸಂಪ್ರದಾಯದ ರೀತಿಯಲ್ಲಿ ಮಣ್ಣುಮಾಡಿ ಅಂತ್ಯಸಂಸ್ಕಾರ ನಡೆಸಿದರು. ಮಾನವನಂತೆ ಪ್ರಾಣಿಗಳಿಗೂ ಅಂತ್ಯಸಂಸ್ಕಾರ ನಡೆಸಬೇಕು ಎಂಬ ನಂಬಿಕೆಯೊಂದಿಗೆ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಯುವಕರು ತಿಳಿಸಿದರು.
ಅಂತ್ಯಸಂಸ್ಕಾರದ ಬಳಿಕ ಮೂರನೇ ದಿನಕ್ಕೆ ಹಾಲು–ತುಪ್ಪ ಕಾರ್ಯವನ್ನು ನೆರವೇರಿಸಲಾಗಿದ್ದು, ನಂತರ 11ನೇ ದಿನದ ತಿಥಿ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ತಿಥಿ ಕಾರ್ಯದ ಅಂಗವಾಗಿ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಜನರು ಹಾಗೂ ಪ್ರಯಾಣಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಜೀವಜಾಲದ ಸಮತೋಲನ ಹಾಗೂ ಪ್ರಾಣಿಗಳ ಮೇಲಿನ ದಯಾಭಾವದ ಮಹತ್ವದ ಕುರಿತು ಯುವಕರು ಸಂದೇಶ ನೀಡಿದರು. ಗ್ರಾಮದ ಹಿರಿಯರು ಈ ಕಾರ್ಯದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡಿದ್ದು, ಅರಣ್ಯ ಜೀವಿಗಳು ಮತ್ತು ಮಾನವನ ನಡುವೆ ಸಹಬಾಳ್ವೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ಸುತ್ತ ನಾಯಿ ಕಡಿತ, ರಸ್ತೆ ಅಪಘಾತಗಳಿಂದ ಪ್ರಾಣಿಗಳು ಸಾವಿಗೀಡಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಮಾನವೀಯ ನಡೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಥಳೀಯರು ಹೇಳಿದರು.


