Online News in ಕನ್ನಡ

ಗಾಂಧೀಜಿ ಹೆಸರು ಬದಲಿಸಿ ಜಾಗತೀಕ ಮಟ್ಟದಲ್ಲಿ ಭಾರತವನ್ನು ಅವಮಾನಿಸಿದ ಬಿಜೆಪಿ: ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ

ಮೈಸೂರು: ಯುಪಿಎ ಸರಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಗೆ ಹೊಸ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಗಾಂಧೀಜಿ ಕಂಡ ಸ್ವರಾಜ್ಯ ಮತ್ತು ಅಂತ್ಯೋದಯದ ಕನಸ್ಸನ್ನು ಭಗ್ನಗೊಳಿಸಿದೆ.  ಅಲ್ಲದೆ, ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿ ಜಾಗತಿಕ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಬಿಜೆಪಿ ಮಾಡಿದೆ ಎಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ  ಆರೋಪಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೀ ರಾಮ್‌ ಜೀ ಹೆಸರಿನಲ್ಲಿ ಮನರೇಗಾ ಯೋಜನೆಯ ಕಾಯ್ದೆಗೆ ತಿದ್ದುಪಡಿ ತಂದಿರುವುದು ಮಾತ್ರವಲ್ಲ, ಗಾಂಧೀಜಿ ಅವರ ಹೆಸರನ್ನೂ ಬದಲಾವಣೆ ಮಾಡಿದ್ದು ನೋವಿನ ಸಂಗತಿ. ʻಶಾಂತಿಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರನ್ನು ಕಂಡು ನಾನು ಜಗತ್ತಿನಲ್ಲಿ ಒಬ್ಬರೇ ಯೇಸು ಇದ್ದಾರೆ ಎಂದು ಭಾವಿಸಿದ್ದ, ಗಾಂಧಿಜೀ ಅವರನ್ನು ನೋಡಿದ ಮೇಲೆ ಇಬ್ಬರು ಯೇಸು ಇದ್ದಾರೆ ಎಂಬ ನಂಬಿಕೆ ಬಂದಿದೆʼ ಎಂದು ಮೌಂಟ್‌ ಬ್ಯಾಟನ್‌ ಅಂದು ಹೇಳಿದ ಮಾತನ್ನು ಸ್ಮರಿಸಿದರು.

ಈ ಮಹತ್ವದ ಯೋಜನೆಯ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ರಾಜ್ಯಗಳ ಜೊತೆ ಚರ್ಚೆ ಮಾಡಬಹುದಿತ್ತು. ಅನುದಾನ ಬಿಡುಗಡೆಯಲ್ಲಿ 60:40 ಅನುಪಾತ ನಿಗದಿಪಡಿಸಿರುವುದು ರಾಜ್ಯಗಳಿಗೆ ಆರ್ಥಿಕ ಹೊರೆಯಾಗಲಿದೆ. ಕನಿಷ್ಠ ವರ್ಷಕ್ಕೆ 100 ದಿನ ಕೆಲಸ ಕಡ್ಡಾಯವಾಗಿ ದೊರಕುವುದರ ಬಲಿಗೆ ಕಾರ್ಪೋರೇಟ್‌ ವಲಯಗಳ ಹಿಡಿತಕ್ಕೆ ಯೋಜನೆ ಹೋದರೆ ಗಾಂಧಿಜೀಯ ಕನಸ್ಸು ನನಸ್ಸಾಗಲು ಹೇಗೆ ಸಾಧ್ಯ ಎಂದು ತಿಳಿಸಿದರು.

ರಾಜ್ಯದಲ್ಲಿ 71 ಲಕ್ಷ ಜನರು ಉದ್ಯೋಗ ಭರವಸೆ ಯೋಜನೆಯಲ್ಲಿ ಬದುಕುತ್ತಿದ್ದಾರೆ. ಇಂತಹ ಕರಾಳ ಶಾಸನ ಅಧಿಕಾರ ವಿಕೇಂದ್ರೀಕರಣ ಕಡೆ ಹೋಗುತ್ತಿದೆ. ಗಾಂಧಿಯವರನ್ನು ಈಗಾಗಲೇ ಕೊಂದರು ಈವಾಗ ಚರಿತ್ರೆಯ ಪುಟಗಳಲ್ಲಿ ತೆಗೆದು ಹಾಕುತ್ತಿದ್ದಾರೆ. ಈ ಕಾಯಿದೆ ಮೂಲಕ ಬಡವರ ಜೀವನ ಆಹಾರದ ಹಕ್ಕನ್ನು ತೆಗೆದು ಹಾಕಿದ್ದಾರೆ. ‌ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಯೋಜನೆಗಳ ಬಗ್ಗೆ ಚರ್ಚೆಗಳು ಆಗಬೇಕಿತ್ತು. 60:40 ಯಲ್ಲಿ ರಾಜ್ಯದ ಹಣಕಾಸನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಕಾಯಿದೆ ಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತದೆ.‌

ಕೇಂದ್ರ ಸರ್ಕಾರ ಜಿಎಸ್‌ಟಿ ಯಿಂದ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆಯನ್ನು ರಾಜ್ಯಕ್ಕೆ ಕೊಡುತ್ತಿಲ್ಲ. ಜನರ ಸಂವಿಧಾನ ಹಕ್ಕುಗಳನ್ನು ರಕ್ಷಿಸಲು ಆಸಕ್ತಿ ಇಲ್ಲ , ಜನರಿಗೆ ಉದ್ಯೋಗದ ಗ್ಯಾರೆಂಟಿ ಇಲ್ಲ , ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಲ್ಲ.

ಈ ವಿಷಯಗಳ ಮೇಲೆ ಯಾವುದೇ ಚರ್ಚೆಗೆ ಸಿದ್ದವಿದ್ದೇವೆ . ಮನರೆಗಾ ಯೋಜನೆ ದೇಶದ 19 ಕೋಟಿ ಜನರ ಬದುಕಿಗೆ ಆಧಾರವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ಡಿ‌, ಡಿಸಿಸಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರಾಧ್ಯಕ್ಷ ಆರ್.‌ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Call Now Button