Online News in ಕನ್ನಡ

ನಶೆ ಮುಕ್ತ ಮೈಸೂರು: ಕನ್ನಡ ಸಂಘಟನೆಗಳಿಂದ ಪ್ರತಿಭಟನಾ ಅಭಿಯಾನ

ಮೈಸೂರು: ಮೈಸೂರು ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣ ಮತ್ತು ಇದಕ್ಕೆ ಕಾರಣವಾಗಿರುವ ಮಾದಕ ವಸ್ತುಗಳ ಅಕ್ರಮ ಮಾರಾಟವನ್ನು ತಡೆದು `ನಶೆ ಮುಕ್ತ ಮೈಸೂರು’ ಮಾಡಬೇಕೆಂದು ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನಾ ಅಭಿಯಾನ ನಡೆಸಲಾಯಿತು.
ನಗರದ ಅಗ್ರಹಾರ ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಿದ ಕನ್ನಡ ಪರ ಹೋರಾಟಗಾರರು, ಮಾದಕ ವಸ್ತುಗಳ ಪೂರೈಕೆ ಹಾಗೂ ಬಳಕೆ ವಿರುದ್ಧ ವಿವಿಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಹಾಡು ಹಗಲೇ ಕೊಲೆ ಸುಲಿಗೆ ನಡೆಯುತ್ತಿದ್ದೆ, ದಸರೆಯ ವೇಳೆ ಅಮಾಯಕ ಹೆಣ್ಣು ಮಗವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಹೊರ ರಾಜ್ಯದಿಂದ ಬಂದು ಮಾದಕ ವಸ್ತುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಿದರೂ ಇಲ್ಲಿನ ಪೊಲೀಸರ ಅರಿವಿಗೆ ಬಂದಿಲ್ಲ. ಅರಮನೆ ಮುಂಭಾಗ ಬಲೂನ್ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಮೂವರು ಮೃತಪಟ್ಟಿದ್ದರು. ಇದರ ನೈಜ ಕಾರಣ ಇಂದಿಗೂ ತಿಳಿದುಬಂದಿಲ್ಲ ಎಂದು ಅಪಾದಿಸಿದರು.
ಅಲ್ಲದೆ, ಮೊನ್ನೆ ಮೊನ್ನೆ ಮೈಸೂರು ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆಯೇ ಮಾದಕ ವ್ಯವನಿ ಯುವಕರು ಹಲ್ಲೆ ನಡೆಸಿದ್ದಾರೆ. ಇದಕ್ಕೆಲ್ಲ ಮಾದಕ ವಸ್ತುಗಳ ಮಾಫಿಯಾ ಕಾರಣ. ಪ್ರಭಾವಿ ವ್ಯಕ್ತಿಗಳೇ ಇಂತಹ ಧಂದೆಗಳಲ್ಲಿ ತೊಡಗಿರುವ ಶಂಕೆ ಇದೆ. ಆದ್ದರಿಂದ ಸರಕಾರ ಮೈಸೂರು ನಗರವನ್ನು ನಶೆ ಮುಕ್ತ ಮೈಸೂರು ಮಾಡಲು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಡಾ. ಎಂ. ಲಿಂಗರಾಜು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ. ಸುಶೀಲ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯೆ ಕಮಲ ನಟರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಎಸ್. ನಾಲಾಬೀದಿ ರವಿ, ಕಾವಲುಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕನ್ನಡ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಕರುನಾಡ ಯೋಗೇಶ್ ಮೊದಲಾದವರು ಹಾಜರಿದ್ದರು.

Call Now Button