Online News in ಕನ್ನಡ

ಕಾರು ಕದ್ದು ಕಡಿಮೆ ದರಕ್ಕೆ ಮಾರಾಟ ಜಾಲ ಪತ್ತೆ- ಮೂವರು ಬಂಧನ

ಮೈಸೂರು: ಐಷರಾಮಿ ಕಾರುಗಳನ್ನು ಕದ್ದು ಕಡಿಮೆ ಬೆಲೆಗೆ ಮಾರಿ ವಂಚಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಮೈಸೂರು ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿ ಸಿ.ಎಸ್.‌ ಅಭಿಷೇಕ್‌ ಅವರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು ೧.೧೦ ಕೋಟಿ ರೂ. ಮೌಲ್ಯದ ೮ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸೆಕೆಂಡ್ಸ್‌ ಕಾರುಗಳನ್ನು ಖರೀದಿಸುವಾಗ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಬಂಧಿತ ಆರೋಪಿಗಳಾದ ಗೌಸಿಯಾನಗರದ ನಿವಾಸಿ ರುಮಾನ್‌ ಷರೀಫ್‌, ರಾಜೀವ್‌ ನಗರದ ನಿವಾಸಿ ಮುಜಾಹಿದ್‌ ಪಾಶ ಹಾಗೂ ಲಷ್ಕರ್‌ ಮೊಹಲ್ಲಾದ ನಿವಾಸಿ ಷಾಹಬುದ್ದೀನ್‌ ಅವರು ಫೆಸ್‌ಬುಕ್‌ನಲ್ಲಿ ಕಡಿಮೆ ದರದಲ್ಲಿ ಐಷರಾಮಿ ಕಾರುಗಳನ್ನು ಮಾರಾಟ ಮಾಡುವುದಾಗಿ ಫೋಸ್ಟರ್‌ ಹಾಕಿದ್ದರು. ಇದನ್ನು ಗಮನಿಸಿ ಅಭಿಷೇಕ್‌ ಎಂಬುವರು ಇವರನ್ನು ಸಂಪರ್ಕಿಸಿ ಕಾರು ಖರೀದಿಸಿ ಮುಂಗಡವಾಗಿ ೫ ಲಕ್ಷ ರೂ.ಗಳನ್ನೂ ನೀಡಿದ್ದಾರೆ. ತದನಂತರ, ಅಭಿಷೇಕ್‌ಗೆ ಕಾರನ್ನು ನೀಡಿ, ಉಳಿದ ಹಣವನ್ನು ದಾಖಲೆ ನೀಡಿದ ಬಳಿಕ ಕೊಡಿ ಎಂದ್ಹೇಳಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಕೆಲ ದಿನಗಳ ನಂತರ ದಾಖಲೆಗಳಿಗಾಗಿ ಸದರಿ ಆರೋಪಿಗಳಿಗೆ ದೂರವಾಣಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈನಡುವೆ, ಮಾರ್ಚ್‌ ೧೮ರಂದು ಕಾರು ಮಾರಿದ್ದ ಆರೋಪಿಗಳು ಬನ್ನೂರಿನ ರಂಗಸಮುದ್ರ ಗೇಟ್‌ ಹತ್ತಿರ ನಿಂತಿದ್ದಾಗ ಇವರನ್ನು ಗಮನಿಸಿದ ಅಭಿಷೇಕ್‌ ದಾಖಲೆಗಳನ್ನು ಕೇಳಿದಾಗ ಜಗಳವಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿತ್ತು. ದೂರು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬನ್ನೂರು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಆಡಿ ಎ೫ ಕಾರು, ಪೋಲೊ ೧.೨, ಚಾವರ್ಲೆಟ್‌ ಕ್ರೂಜ್‌ ಕಾರು ಫೋರ್ಡ್‌ ಎಕೊ ಸ್ಪೋರ್ಟ್ಸ್‌ ಕಾರು, ಆಡಿ ಎಜಿ ಎ೪ ಕಾರು, ವೋಲ್ಸ್‌ ವಾಗನ್‌ ವೆಂಟೋ ಕಾರು, ವೋಲ್ಸ್‌ ವಾಗನ್‌ ಪೋಲೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಕಾರಿನ ಮೌಲ್ಯ ೧. ೧೦ ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬನ್ನೂರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸತೀಶ, ಪಿಎಸ್‌ಐ ಸುದರ್ಶನ್‌, ಎಎಸ್‌ಐ ಸತೀಶ್‌ ಮತ್ತು ಅಬ್ದುಲ್‌ ಲತೀಫರ್‌, ಎನ್.  ಅಶೋಕ್‌ ಭಾಸ್ಕರ್‌ ಮೊದಲಾದವರು ಭಾಗವಹಿಸಿದ್ದರು.

Call Now Button