ಮೈಸೂರು: ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಡಿ. ಸಂಜೀವಯ್ಯ ಟ್ರಸ್ಟ್ ಆವರಣದಲ್ಲಿ ಸುಂದರ, ಸುಸರ್ಜಿತ ಸಿದ್ಧಾರ್ಥ ಬುದ್ಧ ವಿಹಾರವನ್ನು ನಿರ್ಮಾಣ ಮಾಡಲಾಗಿದ್ದು ಮಾರ್ಚ್ 29ರಂದು (ಭಾನುವಾರ) ಬೆಳಗ್ಗೆ 9 ಗಂಟೆಗೆ ಭಿಕ್ಕುಗಳ ಸಮ್ಮುಖದಲ್ಲಿ ಬುದ್ಧ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಈ ಸಂಬಂಧ ಇಂದು ಪತ್ರಕರ್ತರ ಭವನದಲ್ಲಿ ಜಂಟಿ ಮಾಧ್ಯಮಗೋಷ್ಟಿ ನಡೆಸಿದ ಸಮಿತಿಯ ಅಧ್ಯಕ್ಷ ಪ್ರೊ. ನಂಜುಂಡಯ್ಯ ಮತ್ತು ಕಾರ್ಯದರ್ಶಿ ಆರ್. ಮಹಾದೇವಪ್ಪ ಬುದ್ಧ ವಿಹಾರ ನಿರ್ಮಾಣದ ಉದ್ದೇಶ ಮತ್ತು ಧಮ್ಮ ಪಯಣ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಬುದ್ಧ ಧಮ್ಮ ಸಮಿತಿಯನ್ನು ಬಿ. ಬಸವಲಿಂಗಪ್ಪ ಅವರು 1993-94ನೇ ಸಾಲಿನಲ್ಲಿ ಪ್ರಾರಂಭಿಸಿದ್ದರು. ಆರಂಭದ ದಿನಗಳಲ್ಲಿ ಆಸಕ್ತರ ಮನೆಗಳಲ್ಲಿ ʻಧಮ್ಮ ವಂದನೆʼ ಕಾರ್ಯಕ್ರಮವನ್ನು ಪ್ರತಿ ಭಾನುವಾರ ನಿರಂತರವಾಗಿ ನಡೆಸಲಾಯಿತು. ನಂತರ ʻಧಮ್ಮ ಪ್ರಚಾರಕ್ಕೆ ಒಂದು ಬುದ್ಧ ವಿಹಾರ ಅಗತಗ್ಯವಿದೆ ಎಂದು ಮನಗಂಡು ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ವಿಜಯನಗರದ 1ನೇ ಹಂತದಲ್ಲಿರುವ ಸಂಸ್ಥೆಯ ಜಾಗದಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ಜಾಗ ನೀಡಿತ್ತು.
2004ರಲ್ಲಿ ಬಿಕ್ಕು ನಿವಾಸವನ್ನು ನಿರ್ಮಾಣ ಮಾಡಲಾಗಿತ್ತು. ಈ ಸ್ಥಳಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಬೌದ್ಧ ಬಿಕ್ಕುಗಳು ಬಂದು ವಾಸ್ತವ್ಯ ಹೂಡಿ ಹೋಗಿರುತ್ತಾರೆ. ಸದರಿ ಆವರಣದಲ್ಲಿ ದೊಡ್ಡ ಬುದ್ಧ ವಿಹಾರವನ್ನು ಕಟ್ಟಲು ಪ್ರಯತ್ನಿಸಿ, ಅನೇಕ ದಾನಿಗಳ ಸಹಕಾರ ಮತ್ತು ಸರಕಾರದ ಅಲ್ಪ ಸನುದಾನದೊಂದಿಗೆ ಆರ್. ಮಹದೇವಪ್ಪ ಅವರ ಮುಂದಾಳತ್ವ ಮತ್ತು ಆರ್. ನಟರಾಜು ಅವರ ಪರಿಕಲ್ಪನೆಯೊಂದಿಗೆ ಈ ಸುಂದರ ಸುಸಜ್ಜಿತ ಸಿದ್ಧಾರ್ಥ ಬುದ್ಧ ವಿಹಾರವನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ, ವಿಹಾಋದ ಮುಖ್ಯದ್ವಾರದಲ್ಲಿ ಮಧ್ಯ ಪ್ರದೇಶದ ಸಾಂಚಿ ಸ್ತೂಪ ಮಾದರಿಯ ಅಮೋಘವಾದ ಸಾಂಚಿ ದ್ವಾರ ನಿರ್ಮಾಣ ಮಾಡಲಾಗಿದೆ.
ಇದರ ಲೋಕಾರ್ಪಣೆ ಕಾರ್ಯ ಮಾರ್ಚ್ 29ರ ಭಾನುವಾರ ಬೆಳಗ್ಗೆ 9 ಗಂಟೆಗೆ ಬೌದ್ಧ ಬಿಕ್ಕುಗಳ ಸಮ್ಮುಖದಲ್ಲಿ ಧಾರ್ಮಿಕ ಸಭೆಯ ಮೂಲಕ ಬುದ್ಧರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ನಂತರ 11.30ರ ವೇಳೆಗೆ ವೇದಿಕೆ ಕಾರ್ಯಕ್ರಮ ಇದೆ. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ. ಡಿ. ನಂಜುಂಡಯ್ಯ, ಬಿ. ಗೋಪಾಲ್, ಡಾ. ಜಗನ್ನಾಥ್, ಡಿ. ಚಂದ್ರಶೇಖರಯ್ಯ ಭಾವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಎಂ.ಸಾವಕಯ್ಯ, ಹೆಚ್. ಶಿವರಾಜು, ಅಹಿಂದ ಜವರಪ್ಪ, ಮಂಜು ಮೊದಲಾದವರು ಹಾಜರಿದ್ದರು.


