Online News in ಕನ್ನಡ

ಸಾರಿಗೆ ಮುಷ್ಕರದ ಬಿಸಿ ; ಚಾಮರಾಜನಗರದಲ್ಲಿ ಬಸ್​ಗಳಿಲ್ಲದೇ ಜನರು ಪರದಾಡಿದರು

ಚಾಮರಾಜನಗರ: ವೇತನ ಹೆಚ್ಚಳ ಮತ್ತು ವೇತನ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಇಂದಿನ ಮುಷ್ಕರದ ಬಿಸಿ ಗಡಿಜಿಲ್ಲೆಯ ಜನರಿಗೂ ತಟ್ಟಿದೆ‌. ಬೆಳಗ್ಗೆ ಚಾಮರಾಜನಗರದಲ್ಲಿ ಬೆರಳೆಣಿಕೆಯಷ್ಟು ಬಸ್ ಸಂಚಾರ ಮಾತ್ರ ಇದ್ದುದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ಸಾರಿಗೆ ವ್ಯವಸ್ಥೆಯನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದ ಜನರಿಗೆ ಈ ಮುಷ್ಕರದಿಂದ ಪರದಾಡುವಂತ್ತಾಗಿದೆ.

ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆ, ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ತಾಸುಗಟ್ಟಲೆ ಕಾದು ಕಾದು ಸುಸ್ತಾದರು.

ಬಸ್ ನಿಲ್ದಾಣ, ಡಿಪೋದಲ್ಲಿ ಖಾಕಿ ಕಟ್ಟೆಚ್ಚರ: ಬಸ್ ನಿಲ್ದಾಣ, ಡಿಪೋದಲ್ಲೇ ಖಾಕಿ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸ್ ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ.

ನಿಗದಿಯಂತೆ ರೂಟ್​ಗಳಲ್ಲಿ ಸಂಚರಿಸಿ, ಯಾವುದೇ ಭಯ ಬೇಡ ಎಂದು ತಮ್ಮ ಸಿಬ್ಬಂದಿಯನ್ನು ಸಾರಿಗೆ ಅಧಿಕಾರಿಗಳು ಪೊಲೀಸರ ಮೂಲಕ ಮನವೊಲಿಸುತ್ತಿದ್ದಾರೆ. ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಶೇ.20ರಷ್ಟು ಮಾತ್ರ ಬಸ್ ಸಂಚಾರ ನಡೆಸುತ್ತಿವೆ.

ಖಾಸಗಿ ಬಸ್​ಗಳಿಗೆ ಆದಾಯ: ಶಕ್ತಿ ಯೋಜನೆಯಿಂದ ಕಂಗೆಟ್ಟಿದ್ದ ಖಾಸಗಿ ಬಸ್​ಗಳು ಇಂದು ಹುರುಪು ಕಂಡವು‌. ಚಾಮರಾಜನಗರದಿಂದ ಮೈಸೂರು, ಕೊಳ್ಳೇಗಾಲ, ನಂಜನಗೂಡಿಗೆ ಪ್ರಯಾಣಿಕರು ಖಾಸಗಿ ಬಸ್​ಗಳ ಮೊರೆಹೋದರು. KSRTC ಬಸ್ ನಿಲ್ದಾಣದ ಮುಂಭಾಗ ನಿಂತ ಹತ್ತಾರು ಖಾಸಗಿ ಬಸ್​ಗಳಿಗೆ ಪ್ರಯಾಣಿಕರು ಮುಗಿಬಿದ್ದರು.

ಡಿಸಿ ಪ್ರತಿಕ್ರಿಯೆ: KSRTC ಚಾಮರಾಜನಗರ ಡಿಸಿ ಅಶೋಕ್ ಕುಮಾರ್ ಮಾತನಾಡಿ, “ಬೆಳಗ್ಗೆ ಚಾಮರಾಜನಗರದ ಮೂರು ಡಿಪೋಗಳಿಂದ 39 ಬಸ್ ಕಾರ್ಯಾಚರಣೆ ಆರಂಭಿಸಬೇಕಿತ್ತು. ಈ ಪೈಕಿ 13 ಬಸ್‌ಗಳು ಮಾತ್ರ ಡಿಪೋದಿಂದ ನಿರ್ಗಮಿಸಿವೆ. ಡ್ರೈವರ್ಸ್‌ ಮತ್ತು ಕಂಡಕ್ಟರ್ಗಳ ಬರುವಿಕೆಗೆ ಕಾಯುತ್ತಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರನ್ನು ಮನವೊಲಿಸುತ್ತಿದ್ದೇವೆ. ನಿನ್ನೆ ರಾತ್ರಿ ಕಾರ್ಯಾಚರಣೆ ಆರಂಭಿಸಿದ್ದ 149 ಬಸ್​ಗಳ ನೌಕರರು ಕರ್ತವ್ಯದಲ್ಲಿದ್ದಾರೆ” ಎಂದರು.

Call Now Button