ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾರೂ ಸಹ ಊಹಾಪೋಹಗಳಿಗೆ ಕಿಡಿಗೊಡಬಾರದು. ಯಾವುದೇ ನಿರ್ಧಾರ ಕೈಗೊಂಡರೂ ನಿಮಗೆ ತಿಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಶಾಸಕಾಂಗ ಸಭೆಯನ್ನು ನಾಳೆ ಕರೆದಿಲ್ಲ. ನಾಯಕತ್ವದ ಬದಲಾವಣೆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕೈಗೊಂಡಿಲ್ಲ. ಯಾವುದೇ ನಿರ್ಧಾರ ಕೈಗೊಂಡರೂ ಅದು ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಕೈಗೊಳ್ಳುತ್ತೇವೆ ಎಂದು ಹೇಳಿದರು.
ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಒಳಗೊಂಡಂತೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಎಲ್ಲ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ.
ನಮ್ಮ ಸರಕಾರದ ಐದು ಗ್ಯಾರಂಟಿಗಳನ್ನು ಬಿಜೆಪಿ ವಿರೋಧಿಸುತ್ತಿದೆ.
ಅವರಿಗೆ 1. 22 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಹಣ ಪಡೆಯುವುದು ಇಷ್ಟವಿಲ್ಲ.
1. 66 ಕೋಟಿ ಜನ ಉಚಿತ ವಿದ್ಯುತ್ ಪಡೆಯುವುದು ಬೇಕಾಗಿಲ್ಲ.
ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುವುದು ಇಷ್ಟವಿಲ್ಲ.
ಬದಲಿಗೆ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ದರವನ್ನು ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
-ರಣದೀಪ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಎಲ್ಲ ನಿರ್ಧಾರಗಳು ನಾಳೆ, ನಾಳಿದ್ದು, ಇನ್ನೊಂದು ವಾರ, ಒಂದು ತಿಂಗಳಲ್ಲಿ ನಡೆದು ಹೋಗುತ್ತೆ ಎನ್ನುವುದನ್ನು ಹೇಳಲಾಗದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವುದೇ ನಿರ್ಧಾರ ಕೈಗೊಂಡರೂ ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ತೆಗೆದುಕೊಳ್ಳುತ್ತೇವೆಯೇ ವಿನಃ ಯಾವುದೋ ಒಬ್ಬ ವ್ಯಕ್ತಿಯ ಹಿತಾಸಕ್ತಿಗೋಸ್ಕರ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಸ್ವತಃ ಕನ್ನಡಿಗರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಬಗ್ಗೆ ಅಪಾರ ಗೌರವವಿದೆ. ಇಂತಹ ಸಂದರ್ಭದಲ್ಲಿ ಅಹಿತಕರ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿಲ್ಲ. ಯಾವುದೇ ನಿರ್ಧಾರಕೈಗೊಂಡರೂ ತಿಳಿಸುತ್ತೇವೆ. ಊಹಾಪೋಹಗಳಿಗೆ ಕಿಡಿಗೊಡಬೇಡಿ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದರು.


