ಚಿಕ್ಕಬಳ್ಳಾಪುರ: ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾನರ್ ತೆರವುಗೊಳಿಸಿದ ಕಾರಣಕ್ಕೆ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಹಿನ್ನಲ್ಲೆಯಲ್ಲಿ ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿ ಶಿಡ್ಲಘಟ್ಟ ನಗರಸಭೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡಸುತ್ತಿದ್ದಾರೆ.
ಶಿಡ್ಲಘಟ್ಟದ ಪ್ರಮುಖ ರಸ್ತೆಯಲ್ಲಿ ಚಲನಚಿತ್ರದ ಬ್ಯಾನರ್ವೊಂದನ್ನು ಅಕ್ರಮವಾಗಿ ಅಳವಡಿಸಿದ್ದನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಅಮೃತಾಗೌಡ ಅವರಿಗೆ ದೂರವಾಣಿ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರಿಬ್ಬರ ಫೋಷನ್ ಸಂಭಾಷಣೆ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡನ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕ್ಷಮೆ ಕೇಳಿದ ರಾಜೀವ್ ಗೌಡ !
` ನಾನು ಉದ್ದೇಶಪೂರ್ವಕವಾಗಿ ಆ ಮಾತುಗಳನ್ನು ಆಡಿಲ್ಲ. ಅವರು ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದೇನೆ. ಬ್ಯಾನರ್ಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದೇನೆ ವಿನಃ ಅವರಿಗಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ- ರಾಜೀವ್ ಗೌಡ, ಕಾಂಗ್ರೆಸ್ ಮುಖಂಡ.

