ಬೆಂಗಳೂರು: ಗುರುವಾರದಿಂದ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸರಕಾರವನ್ನು ಎದುರಿಸಲು ಸಜ್ಜಾಗಿವೆ. ದುರದೃಷ್ಟ ವಶಾತ್ ದೇಶಕ್ಕೆ ಅಹಿಂಸೆಯ ಮಾರ್ಗ ತೋರಿಸಿಕೊಟ್ಟ ಶಾಂತಿ ಪ್ರಿಯನಿಗಾಗಿ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಸಂಘರ್ಷ ಏರ್ಪಟ್ಟಿರುವುದು ಈ ದೇಶದ ದುರಂತ.
ಜನವರಿ 22 ರಿಂದ 31 ರವರೆಗಿನ ಅಧಿವೇಶನವು ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿಧಾನಮಂಡಲದ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವದರೊಂದಿಗೆ ಆರಂಭವಾಗಬೇಕಿತ್ತು. ಆದರೆ ಇದೀಗ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ.
ರಾಜ್ಯಪಾಲರಿಂದ ಭಾಷಣ ನಿರಾಕರಣೆ
ಬೆಂಗಳೂರು: ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ.
ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಲೋಕಭವನಕ್ಕೆ ಭೇಟಿ ನೀಡಿ, ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದರೂ ರಾಜ್ಯಪಾಲರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಜ್ಯಪಾಲರ ಈ ನಡೆ ಸಂಸದೀಯ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ರದ್ದುಗೊಳಿಸಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಮತ್ತು ವಿಬಿ-ಜಿ ರಾಮ್ ಜಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆ ಇದೆ.
ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ, ಈ ಕಾಯ್ದೆ ವಿರುದ್ಧ ಕಾನೂನು ಹೋರಾಟ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು.
ಹಿಂದಿನ ಮನರೇಗಾ ಕಾಯ್ದೆಯಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ವರದಿಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧತೆ ನಡೆಸಿದೆ.
ಅಲ್ಲದೆ ರಾಜ್ಯದಲ್ಲಿ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯಗಳ ಆರೋಪ ಹೊರಿಸಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಬಿಜೆಪಿ ಸಿದ್ಧವಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಅಕ್ರಮ ವಿಪಕ್ಷದ ಬತ್ತಳಿಕೆಯ ಪ್ರಬಲ ಅಸ್ತ್ರವಾಗಿದೆ. ಇದನ್ನು ಮುಂದಿಟ್ಟುಕೊಂಡು ಸಚಿವ ಆರ್ ಬಿ ತಿಮ್ಮಾಪೂರ ಅವರ ರಾಜೀನಾಮೆಗೆ ಪಟ್ಟು ಹಿಡಿಯಲು ತೀರ್ಮಾನ ಮಾಡಲಾಗಿದೆ.


