ಬೆಂಗಳೂರು- ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮಾನಾಸ್ಪದ ಸಾವುಗಳ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳು, ಬುಧವಾರ 14ನೇ ಸ್ಥಳದಲ್ಲಿ ಮತ್ತಷ್ಟು ಉತ್ಖನನ ನಡೆಸಿದ್ದಾರೆ.
ಆದರೆ, ಇಲ್ಲಿಯೂ ತನಿಖಾಧಿಕಾರಿಗಳಿಗೆ ಯಾವುದೇ ಉತ್ಖನನ ಪತ್ತೆಯಾಗಿಲ್ಲ. ಹೀಗಾಗಿ ದಿನದ ಕಾರ್ಯಾಚರಣೆಯನ್ನು ಮುಗಿಸಲಾಗಿದೆ.
ಈ ಮೊದಲು ಬಂಗ್ಲಗುಡ್ಡದಲ್ಲಿ ತಾನು ತೋರಿಸಿದ್ದ ಜಾಗ ಹೊರತುಪಡಿಸಿ ಮತ್ತೊಂದು ಸ್ಥಳಕ್ಕೆ ಎಸ್‍ಐಟಿ ಅಧಿಕಾರಿಗಳನ್ನು ಅನಾಮಧೇಯ ವ್ಯಕ್ತಿ ಕರೆದುಕೊಂಡು ಹೋಗಿದ್ದ. ಅಲ್ಲಿ ಭೂಮಿಯ ಮೇಲ್ಭಾಗದಲ್ಲೇ ಹಲವಾರು ಅಸ್ಥಿಗಳು ದೊರೆತ್ತಿದ್ದವು ಅವುಗಳನ್ನು ಜಪ್ತಿ ಮಾಡಲಾಗಿತ್ತು. ಬಂಗ್ಲಗುಡ್ಡದ ಮೇಲೆ ಆತಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಅಸ್ಥಿಗಳಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿತ್ತು. ಭೂಮಿಯ ಮೇಲ್ಭಾಗದಲ್ಲಿ ಸಿಕ್ಕಿರುವ ಅಸ್ಥಿಗಳ ಕುರಿತು ತನಿಖೆ ನಡೆಸಬೇಕೆ? ಬೇಡವೇ? ಎಂಬ ಗೊಂದಲದಲ್ಲಿ ಎಸ್‍ಐಟಿ ಅಧಿಕಾರಿಗಳು ಇದ್ದಾರೆ.
ಈ ನಡುವೆ ಅನಾಮಧೇಯ ಗುರುತಿಸಿರುವ 13ನೇ ಪಾಯಿಂಟ್‍ನಲ್ಲಿ ಶವಗಳು ಸಿಕ್ಕೇ ಸಿಗುತ್ತವೆ ಎಂದು ಸುಜಾತಭಟ್ ಅವರ ವಕೀಲ ಮಂಜುನಾಥ್ ಹೇಳಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. 13ನೇ ಪಾಯಿಂಟ್‍ನಲ್ಲಿ ಸುತ್ತಲೂ ಹುಲ್ಲು ಬೆಳೆದಿದ್ದು, ಅನಾಮಿಕ ಗುರುತಿಸಿದ ಸ್ಥಳದಲ್ಲಿ ಮಾತ್ರ ಖಾಲಿ ಇದೆ. ಅದರ ಅರ್ಥ ಈ ಸ್ಥಳದಲ್ಲಿ ಪೂರ್ವನಿಯೋಜಿತವಾಗಿ ಕಳೇಬರಗಳನ್ನು ತಂದಿಟ್ಟಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ತಕ್ತಪಡಿಸಿದ್ದಾರೆ.
2018-19ರ ಮೊದಲು 13ನೇ ಪಾಯಿಂಟ್ ಗುರುತಿಸಿದ ಸ್ಥಳ ನೀರಿನ ಹರಿವಿನ ಜಾಗವಾಗಿತ್ತು. ನೆರೆಯ ಹಾವಳಿನಿಂದ ಕೊರಕಲು ಉಂಟಾಗಿದ್ದು, ಮಣ್ಣನ್ನು ಹಾಕಿ ಕೃತಕವಾಗಿ ಅಲ್ಲಿ ಬಯಲು ಪ್ರದೇಶವನ್ನು ನಿರ್ಮಾಣಿಸಲಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.
ನೇತ್ರಾವತಿ ಸ್ನಾನದ ಕಿಂಡಿ ಅಣೆಕಟ್ಟು ಸಮೀಪ ರಸ್ತೆ ಬದಿಯಲ್ಲಿರುವ ಈ ಸ್ಥಳದಲ್ಲಿ ಶವಗಳು ಸಿಗುತ್ತವೆ ಎಂಬ ಅನಾಮಿಕ ದೂರುದಾರನ ಖಚಿತ ವಿಶ್ವಾಸ, ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತನ್ನು ಕೈಗೊಂಡಿದ್ದಾರೆ. ಇಂದು 13ನೇ ಸ್ಥಳವನ್ನು ಅಗೆಯಬೇಕಿತ್ತು. ಆದರೆ ದೂರುದಾರನ ಮನವಿಯ ಮೇರೆಗೆ 14ನೇ ಸ್ಥಳದಲ್ಲೇ ಉತ್ಖನನವನ್ನು ಮುಂದುವರೆಸಲಾಗಿದೆ.
ಅಲ್ಲಿ ಹೆಚ್ಚಿನ ಪುರಾವೆಗಳು ದೊರೆಯಬಹುದು ಎಂದು ಆತ ಹೇಳಿದ್ದಾನೆ. ಈ ಮೊದಲಿನ ಉತ್ಖನದಲ್ಲಿ ಎಸ್‍ಐಟಿ ಅಧಿಕಾರಿಗಳು ತಮ ತನಿಖೆಗೆ ಗಂಭೀರ ಎಂದು ಪರಿಗಣಿಸಬಹುದಾದ ಮಾಹಿತಿಗಳು ಅಥವಾ ಪುರಾವೆಗಳು ಪತ್ತೆಯಾಗಿಲ್ಲ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ.
ಈ ನಡುವೆ ಅನಾಮಿಕ ದೂರುದಾರ ಮತ್ತೇ 17 ಸ್ಥಳಗಳನ್ನು ಗುರುತಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಎಸ್‍ಐಟಿಯ ಮುಖ್ಯಸ್ಥ ಪ್ರಣಬ್ ಮೊಹಾಂತಿ ಇಂದು ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಕಾರ್ಯಚರಣೆಯ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ಒಂದು ವೇಳೆ 14 ಮತ್ತು 13ನೇ ಪಾಯಿಂಟ್‍ಗಳಲ್ಲಿ ಹೆಚ್ಚಿನ ಪುರಾವೆಗಳು ದೊರೆಯದೇ ಇದ್ದರೆ ಮತ್ತೆ ದೂರುದಾರನನ್ನು ವಿಚಾರಣೆಗೊಳಪಡಿಸುವುದಾಗಿ ತಿಳಿದು ಬಂದಿದೆ. ಆತ ನೀಡುವ ಮಾಹಿತಿಗಳ ಸತ್ಯಾಸತ್ಯತೆ ಆಧರಿಸಿ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಲಾಗುತ್ತಿದೆ


