ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಇತರ ಇಬ್ಬರ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸರಿಯಲ್ಲ. ಅವರು ಹಿಂದೂ ಸಂಪ್ರದಾಯ ವಿರೋಧಿಯಾಗಿದ್ದು, ಅರಿಶಿಣ, ಕುಂಕುಮದ ಮೇಲೆ ಗೌರವ ಇಲ್ಲ. ಹೀಗಾಗಿ ಅವರ ಆಯ್ಕೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ, ಅಭಿನವ ಭಾರತ್ ಪಾರ್ಟಿಯ ಆರ್. ಸೌಮ್ಯ, ಉದ್ಯಮಿ ಟಿ. ಗಿರೀಶ್ ಕುಮಾರ್ ಎಂಬವರು ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ವಾದ, ಪ್ರತಿವಾದಗಳನ್ನು ಆಲಿಸಿತು. ನಂತರ ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಹೇಗೆ ಉಲ್ಲಂಘಿಸುತ್ತದೆ ಎಂದು ಪ್ರಶ್ನಿಸಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿ ಅರ್ಜಿದಾರ ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕು. ಪ್ರತಾಪ್ ಸಂಸದರಾಗಿದ್ದಾಗ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು. ಈ ವಿಚಾರವನ್ನು ಅವರು ಬಹಿರಂಗಪಡಿಸಿಲ್ಲ. ಬಾನು ಮುಷ್ತಾಕ್ ಅವರು ಬುಕರ್ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಇದು ರಾಜ್ಯದ ಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ ಎಂದರು.
ಹಿಂದೂ-ಮುಸ್ಲಿಮ್ ಎಂದು ಕಂದಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ದಸರಾ ಜಾತ್ಯತೀತ ಹಬ್ಬವಾಗಿದ್ದು, ಇದನ್ನು ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ವೇಳೆ ಅರ್ಜಿದಾರರ ಪರ ವಕೀಲ ಸುದರ್ಶನ್ ಅವರು ನಿಸಾರ್ ಅಹ್ಮದ್ ಅವರು ಮುಸ್ಲಿಮ್ ಆಗಿದ್ದರೂ ಕನ್ನಡ ಮಾತೆಯ ಬಗ್ಗೆ ಪದ್ಯ ಬರೆದಿದ್ದಾರೆ. ನಿಸಾರ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿರಲಿಲ್ಲ ಎಂದರು.
ಈ ಹಂತದಲ್ಲಿ ಪೀಠವು ವಿಜಯದಶಮಿ ಎಂದರೇನು? ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಎಂಬುದಾಗಿದೆ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದಿತು. ಅದಾಗ್ಯೂ, ವಾದ ಮುಂದುವರಿಸಲು ಯತ್ನಿಸಿದ ಪ್ರತಾಪ್ ಸಿಂಹ ಪರ ವಕೀಲರನ್ನು ಕುರಿತು ಪೀಠವು ನಮ್ಮ ಆದೇಶ ನೀಡಲಾಗಿದೆ. ದಂಡ ವಿಧಿಸಬೇಕೆ? ಈ ನ್ಯಾಯಾಲಯದಲ್ಲಿ ನೀವು ಹೀಗೆಲ್ಲಾ ಮಾಡಲಾಗದು ಎಂದು ಎಚ್ಚರಿಕೆ ನೀಡಿತು.


