Online News in ಕನ್ನಡ

ಬೆಳಗಾವಿಯಲ್ಲಿ‌ ಡಿನ್ನರ್ ಪಾಲಿಟಿಕ್ಸ್ : ಸಿಎಂ-ಡಿಸಿಎಂ ಬಣದ ಶಾಸಕರಿಂದ ಸಭೆ 

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಿಕ್ಕಿಟ್ಟಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಬ್ರೇಕ್ ಹಾಕಲಾಗಿದೆ ಎನ್ನುವಷ್ಟರಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬಣದ ಶಾಸಕರಿಂದ ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆ. ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಬಳಿಕ ಪ್ರತ್ಯೇಕ ಸಭೆಗಳು ಹೆಚ್ಚಾಗಿದೆ.
ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು. ಗುರುವಾರ ರಾತ್ರಿ ತಮ್ಮ ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್ ಹೌಸ್‌ನಲ್ಲಿ ಆಪ್ತ ಸಚಿವರು, ಶಾಸಕರ ಜೊತೆ ಡಿಕೆಶಿ ಸಭೆ ನಡೆಸಿದ್ದಾರೆ. ಡಿಕೆಶಿ ಸಹೋದರ ಡಿ.ಕೆ ಸುರೇಶ್ ಅವರು ಈ ಡಿನ್ನರ್ ವ್ಯವಸ್ಥೆ ಮಾಡಿದ್ದರು.
ಈ ಡಿನ್ನರ್ ಸಭೆಯಲ್ಲಿ ಐದಕ್ಕೂ ಹೆಚ್ಚು ಸಚಿವರು, 40ಕ್ಕೂ ಹೆಚ್ಚು ಶಾಸಕರು ಸೇರಿದಂತೆ ಆಪ್ತರು ಭಾಗಿಯಾಗಿದ್ದರು. ಸಿಎಂ ಬಣದವರಿಗೆ ಆಹ್ವಾನ ನೀಡದೇ ಡಿಕೆಶಿ ಆಪ್ತರು ಮಾತ್ರ ಈ ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಡಿನ್ನರ್ ಮೀಟಿಂಗ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ. ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು ಡಿಕೆಶಿಗೆ ಒತ್ತಡ ಹಾಕಿದ್ದಾರೆ. ಈ ವೇಳೆ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ, ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಂದಿನ ವಾರ ಡಿಸಿಎಂ ಡಿಕೆಶಿ ಅವರನ್ನು ದೆಹಲಿಗೆ ಹೈಕಮಾಂಡ್ ಕರೆದಿದೆ ಎಂದು ಹೇಳಲಾಗುತ್ತಿದೆ. ಸಿಎಂ ಬದಲಾವಣೆ ವಿಚಾರ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೆ ಹೋಗುತ್ತೇವೆ ಎಂದು ಕೆಲವು ಶಾಸಕರು ಡಿಕೆ ಶಿವಕುಮಾರ್‌ಗೆ ಆಶ್ವಾಸನೆ ನೀಡಿದ್ದಾರೆ. ನಿಮಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು, ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಮಾಡ್ಕೊಳ್ಳುತ್ತೇವೆ ಎಂದು ಶಾಸಕರು ಒಕ್ಕೊರಲಿನಿಂದ ಅಭಿಪ್ರಾಯ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

Call Now Button