ಮೈಸೂರು: ದಸರೆಯ ಸಂಭ್ರಮ ಮಾಸುವ ಮುನ್ನ ಮೈಸೂರು ಮತ್ತೊಮ್ಮೆ ಮಾಗಿ ಉತ್ಸವಕ್ಕೆ ಮೈಯೊಡ್ಡಿ ನಿಂತಿದೆ. ಅರಮನೆಯ ಅಂಗಳದಲ್ಲಿ ಡಿ.21ರಿಂದ 31ರವರೆಗೆ ನಡೆಯಲಿರುವ ಉತ್ಸವದ ಪ್ರಮುಖ ಆಕರ್ಷಣೆ ಫಲಪುಷ್ಪ ಪ್ರದರ್ಶನ ಮತ್ತು ಸಂಗೀತ ಯಾನ. ಈ ಚಳಿಗಾಲದ ಮಾಗಿ ಉತ್ಸವಕ್ಕೆ ಸಹಸ್ರಾರು ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
11 ದಿನಗಳ ಕಾಲ ನಡೆಯುವ ಮಾಗಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನದ ಜೊತೆಗೆ ಐದು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸುಗಮ ಸಂಗೀತ, ಜಾನಪದ, ಚಲನಚಿತ್ರ ಗೀತಗಾಯನ ಕಾರ್ಯಕ್ರಮಗಳು ಜರುಗಲಿದೆ. ನಾಡಿನ ಹೆಸರಾಂತ ಗಾಯಕ, ಗಾಯಕಿಯರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

` ಡಿ.21 ರಿಂದ 31 ರವರಗೆ ಅರಮನೆ ಆವರಣದಲ್ಲಿ ನಡೆಯುವ ಮಾಗಿ ಉತ್ಸವಕ್ಕೆ ಸುಮಾರು 1.25 ಲಕ್ಷ ವಿವಿಧ ಬಗೆಯ ಹೂವಿನ ಸಸಿಗಳು, 15 ಸಾವಿರಕ್ಕೂ ಹೆಚ್ಚು ಹೂವು ಕುಂಡಗಳನ್ನು ಬೆಳೆಸಲಾಗಿದೆ. ಈಗಾಗಲೇ ಅರಮನೆ ಆವರಣದಲ್ಲಿ ಡಿ.21 ಕ್ಕೆ ಉದ್ಘಾಟನೆ ವೇಳೆಗೆ ಎಲ್ಲಾ ಬಗೆಯ ಹೂವುಗಳು ಅರಳುವ ಹಾಗೆ ಒಂದು ಹಂತಕ್ಕೆ ಬಂದಿವೆ. ಬೇಗೆ ಬೆಳವಣಿಗೆ ಆಗಿ ಹೂವು ಅರಳುವಂತೆ ಹೆಚ್ಚುವರಿಯಾಗಿ ಗಿಡಗಳ ಪೋಷಣೆ ಮಾಡಲಾಗುತ್ತಿದೆ ‘

– ಯೋಗೇಶ್, ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ(ಅರಮನೆ ಆಡಳಿತ ಮಂಡಳಿ)
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಶೃಂಗೇರಿ ಶಾರದಾಂಬೆ ದೇವಸ್ಥಾನ, ಇತ್ತೀಚೆಗೆ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಮುಮ್ಮಡಿ ಕೃಷ್ಣರಾಜ ಒಡೆಯರ್, ಆಪರೇಷನ್ ಸಿಂಧೂರ್ ಮೊದಲಾದ ಮಾದರಿಯ ಕಲಾಕೃತಿಗಳು ಅರಳಲಿದೆ. ಜತೆಗೆ ಪರಿಸರ, ಪ್ರಾಣಿ, ಪಕ್ಷಗಳು, ಕೀಟಗಳು ಮೂಡಿಬರಲಿದೆ. ಇದಕ್ಕಾಗಿ ಮೂರುವರೆ ಲಕ್ಷಕ್ಕೂ ಹೆಚ್ಚು ವಿವಿಧ ಬಗೆಯ ಹೂವುಗಳನ್ನು ಬಳಸಲಾಗುತ್ತಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಹೂಗುಂಡ, 26 ಜಾರಿಯ ಹೂವುಗಳು, 1.25 ಲಕ್ಷ ಹೂವಿನ ಸಸಿಗಳನ್ನು ಪ್ರದರ್ಶನಕ್ಕೆ ಸಿಂಗರಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಉತ್ಸವದ ಮೊದಲ ಐದು ದಿನ (ಡಿ.21ರಿಂದ 25) ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಫಲಪುಷ್ಪ ಪ್ರದರ್ಶನದ ಜೊತೆಗೆ ಎಂದಿನಂತೆ ಗೊಂಬೆ ಮನೆಯಲ್ಲಿ ಗೊಂಬೆಗಳ ಪ್ರದರ್ಶನ, ಮೈಸೂರು ರಾಜ ವಂಶಸ್ಥರು, ನಾಡು, ನುಡಿಗಾಗಿ ಸೇವೆ ಸಲ್ಲಿಸಿದ ಸಾಧಕರ ಫೋಟೋ ಗ್ಯಾಲರಿ ಮತ್ತು ಮೈಸೂರು ಮಹಾರಾಜರ ವಿಡಿಯೋ ಚಿತ್ರ ಪ್ರದರ್ಶನವೂ ಇರುತ್ತದೆ. ಇದಲ್ಲದೆ ಕಾರ್ಯಕ್ರಮ ಉದ್ಘಾಟನೆ ದಿನ ಸಂಜೆ ಕುಸ್ತಿ ಪಂದ್ಯಾವಳಿಯೂ ಜರುಗಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ಕಿರುತೋಟ ಮಾಡುವ ಬಗ್ಗೆ ಒಂದು ಪ್ರಾತ್ಯಕ್ಷಿಕೆಯೂ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಬೇಕಾಗ ಎಲ್ಲಾ ತಯಾರಿಗಳನ್ನು ಅರಮನೆ ಆಡಳಿತ ಮಂಡಳಿ ಮತ್ತು ಅಲ್ಲಿನ ತೋಟಗಾರಿಕಾ ಇಲಾಖೆ ಮಾಡಿಕೊಳ್ಳುತ್ತಿದೆ.


